ಪಂಜಾಬ್ | ದಲಿತ ಯುವಕನನ್ನು ಥಳಿಸಿ, ಗಡ್ಡ ಬೋಳಿಸಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ದುಷ್ಕರ್ಮಿಗಳು

ಸಾಂದರ್ಭಿಕ ಚಿತ್ರ
ಲುಧಿಯಾನ : ಪಂಜಾಬ್ನ ಲುಧಿಯಾನದ ಹಳ್ಳಿಯೊಂದರಲ್ಲಿ ದಲಿತ ಯುವಕನನ್ನು ಥಳಿಸಿ, ಗಡ್ಡ ಬೋಳಿಸಿ ಮುಖಕ್ಕೆ ಕಪ್ಪು ಬಣ್ಣ ಬಳಿದು ಅರೆಬೆತ್ತಲೆ ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಹರ್ಜೋತ್ ಸಿಂಗ್ ಎಂಬ ಯುವಕನ ಮೇಲೆ ದೌರ್ಜನ್ಯ ನಡೆದಿದೆ. ಲುಧಿಯಾನದ ಹೊರವಲಯದಲ್ಲಿರುವ ಸೀದಾ ಗ್ರಾಮದಲ್ಲಿ ನಡೆದ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹರ್ಜೋತ್ ಸಿಂಗ್ ಸ್ನೇಹಿತ ಯುವತಿಯೋರ್ವಳ ಜೊತೆ ಪರಾರಿಯಾಗಿ ಜೂನ್ 19ರಂದು ವಿವಾಹವಾಗಿದ್ದ. ಆತನಿಗೆ ಹರ್ಜೋತ್ ಸಿಂಗ್ ಸಹಾಯ ಮಾಡಿದ್ದಾನೆಂದು ಶಂಕಿಸಿ ಯುವತಿಯ ಕುಟುಂಬಸ್ಥರು ಈ ಕೃತ್ಯವನ್ನು ಎಸಗಿದ್ದಾರೆ.
ʼಸಲೂನ್ ಒಳಗೆ ನುಗ್ಗಿ ಹರ್ಜೋತ್ ಸಿಂಗ್ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಬಲವಂತವಾಗಿ ಗಡ್ಡ ಮತ್ತು ಮೀಸೆಯನ್ನು ಬೋಳಿಸಿ ಮುಖಕ್ಕೆ ಕಪ್ಪು ಬಣ್ಣ ಬಳಿದು ಬಟ್ಟೆಗಳನ್ನು ಹರಿದು ಅರೆಬೆತ್ತಲೆಯಾಗಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಜಾತಿ ನಿಂದನೆಗೈದಿದ್ದಾರೆ. ಇದಲ್ಲದೆ ಘಟನೆಯ ದೃಶ್ಯವನ್ನು ಸೆರೆಯಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆʼ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರನ್ನು ಗುರುಪ್ರೀತ್, ಸಿಮ್ರನ್ಜೀತ್ ಸಿಂಗ್, ಸಂದೀಪ್, ರಾಜ್ವೀರ್ ಮತ್ತು ರಮಣದೀಪ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 127(2) ಮತ್ತು 351 ಹಾಗೂ ಐಟಿ ಕಾಯ್ದೆ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆಹರ್ಬನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರಮದೀಪ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ಪ್ರಕರಣದ ಓರ್ವ ಆರೋಪಿ ಸಿಮ್ರನ್ಜೀತ್ ಸಿಂಗ್ನನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳನ್ನು ಬಂಧಿಸಿ ಶೀಘ್ರದಲ್ಲೇ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.