ವೈದ್ಯಕೀಯ ಚಿಕಿತ್ಸೆ ಪಡೆಯಲು ಒಪ್ಪಿದ ರೈತ ನಾಯಕ ದಲ್ಲೇವಾಲ್
ಫೆ. 14ರಂದು ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಲಿರುವ ಕೇಂದ್ರ ಸರಕಾರ

ರೈತ ನಾಯಕ ಜಗ್ಜೀತ್ ಸಿಂಗ್ ದಲ್ಲೇವಾಲ್ (Photo: PTI)
ಚಂಡೀಗಢ: ಪಂಜಾಬ್ ನ ಪ್ರತಿಭಟನಾನಿರತ ರೈತರೊಂದಿಗೆ ಫೆಬ್ರವರಿ 14ರಂದು ಕೇಂದ್ರ ಸರಕಾರ ಮಾತುಕತೆ ನಡೆಸಲಿದ್ದು, ಆ ಮೂಲಕ ನೆನೆಗುದಿಗೆ ಬಿದ್ದಿದ್ದ ಶಾಸನಾತ್ಮಕ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸುತ್ತಿರುವ ರೈತರೊಂದಿಗಿನ ಮಾತುಕತೆಯು ಪುನಾರಂಭಗೊಳ್ಳಲಿದೆ.
ಪ್ರಸ್ತಾವಿತ ಮಾತುಕತೆಯ ಪ್ರಕಟಣೆಯ ಬೆನ್ನಿಗೇ, 54 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತ ನಾಯಕ ಜಗ್ಜೀತ್ ಸಿಂಗ್ ದಲ್ಲೇವಾಲ್, ವೈದ್ಯಕೀಯ ಚಿಕಿತ್ಸೆ ಪಡೆಯಲು ಸಮ್ಮತಿಸಿದ್ದಾರೆ.
ಆದರೆ, ರೈತರ ಬೆಳೆಗಳಿಗೆ ಶಾಸನಾತ್ಮಕ ಬೆಂಬಲ ಬೆಲೆ ಘೋಷಣೆಯಾದ ನಂತರವೇ ದಲ್ಲೇವಾಲ್ ತಮ್ಮ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ ಎಂದು ರೈತ ನಾಯಕ ಸುಖ್ ಜೀತ್ ಸಿಂಗ್ ಹರ್ದೋಝಾಂದೆ ತಿಳಿಸಿದ್ದಾರೆ.
ಜಂಟಿ ಕಾರ್ಯದರ್ಶಿ ಪ್ರಿಯಾ ರಂಜನ್ ನೇತೃತ್ವದ ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಗಳ ನಿಯೋಗವೊಂದು ದಲ್ಲೇವಾಲ್ ರನ್ನು ಭೇಟಿಯಾಗಿ, ಕಳೆದ 11 ತಿಂಗಳಿನಿಂದ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಝ್ದೂರ್ ಮೋರ್ಚಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ.
ಫೆಬ್ರವರಿ 14ರಂದು ಮಾತುಕತೆ ನಡೆಸಲಾಗುವುದು ಎಂದು ಪ್ರಕಟಿಸಿದ ನಂತರ, ಈ ಪ್ರಸ್ತಾವಿತ ಮಾತುಕತೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲು ವೈದ್ಯಕೀಯ ಚಿಕಿತ್ಸೆ ಪಡೆಯಲು ದಲ್ಲೇವಾಲ್ ಸಮ್ಮತಿಸಿದ್ದಾರೆ.
ಇದಕ್ಕೂ ಮುನ್ನ, ಫೆಬ್ರವರಿ 14ರಂದು ಚಂಡೀಗಢದ ಮಹಾತ್ಮ ಗಾಂಧಿ ರಾಜ್ಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ನಡೆಯಲಿರುವ ಪ್ರಸ್ತಾವಿತ ಮಾತುಕತೆಯಲ್ಲಿ ಪಾಲ್ಗೊಳ್ಳಲು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಕೇಂದ್ರ ನಿಯೋಗವು ದಲ್ಲೇವಾಲ್ ಅವರಿಗೆ ಮನವಿ ಮಾಡಿತು.







