ಭಾರತದಲ್ಲಿ ರಫೇಲ್ ಬಿಡಿಭಾಗಗಳ ನಿರ್ಮಾಣ ಒಪ್ಪಂದಕ್ಕೆ ಡಸಾಲ್ಟ್, ಟಾಟಾ ಸಹಿ

PC : PTI
ಹೊಸದಿಲ್ಲಿ: ರಫೇಲ್ ಯುದ್ಧವಿಮಾನಗಳ ಕೇಂದ್ರ ಭಾಗ (ರೆಕ್ಕೆ ಮತ್ತು ಬಾಲವನ್ನು ಹೊರತುಪಡಿಸಿದ)ವನ್ನು ಭಾರತದಲ್ಲಿ ನಿರ್ಮಿಸಲು ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.
‘‘ಇದು ಭಾರತೀಯ ವಾಯು ಕ್ಷೇತ್ರ ಮೂಲಸೌಕರ್ಯ ಕ್ಷೇತ್ರದಲ್ಲಿ ಬೃಹತ್ ಹೂಡಿಕೆಗೆ ಕಾರಣವಾಗಲಿದೆ ಹಾಗೂ ಭಾರತವು ಅತ್ಯುತ್ತಮ ಗುಣಮಟ್ಟದ ಉತ್ಪಾದನೆಯ ಮಹತ್ವದ ಕೇಂದ್ರವಾಗಲಿದೆ’’ ಎಂದು ಜಂಟಿ ಪತ್ರಿಕಾ ಹೇಳಿಕೆಯೊಂದರಲ್ಲಿ ಕಂಪೆನಿಗಳು ಹೇಳಿವೆ.
‘‘ಈ ಭಾಗೀದಾರಿಕೆಯ ಭಾಗವಾಗಿ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ರಫೇಲ್ ನ ಪ್ರಮುಖ ಭಾಗಗಳ ಉತ್ಪಾದನೆಗಾಗಿ ಹೈದರಾಬಾದ್ನಲ್ಲಿ ಅತ್ಯಾಧುನಿಕ ಉತ್ಪಾದನಾ ಸ್ಥಾವರವೊಂದನ್ನು ನಿರ್ಮಿಸಲಿದೆ. ಇಲ್ಲಿ ರಫೇಲ್ ವಿಮಾನದ ಒಡಲಿನ ಶೆಲ್ ಗಳು, ಸಂಪೂರ್ಣ ಹಿಂಭಾಗ, ಮಧ್ಯ ಒಡಲು ಮತ್ತು ಮುಂಭಾಗ ಸೇರಿದಂತೆ ಹಲವು ಮಹತ್ವದ ಭಾಗಗಳನ್ನು ನಿರ್ಮಿಸಲಾಗುವುದು’’ ಎಂದು ಹೇಳಿಕೆ ತಿಳಿಸಿದೆ.
ಈ ಒಪ್ಪಂದದ ಪ್ರಕಾರ, ರಫೇಲ್ ವಿಮಾನದ ಪ್ರಧಾನ ಭಾಗಗಳ ಮೊದಲ ಪೂರೈಕೆ 2028ರಲ್ಲಿ ಆರಂಭವಾಗುತ್ತದೆ. ಈ ಸ್ಥಾವರವು ತಿಂಗಳಿಗೆ ಎರಡು ಸಂಪೂರ್ಣ ಒಡಲುಗಳನ್ನು (ಫ್ಯೂಸಲಾಷ್) ಪೂರೈಸುವ ನಿರೀಕ್ಷೆಯಿದೆ.
ರಫೇಲ್ ವಿಮಾನದ ಪ್ರಧಾನ ಒಡಲು ಫ್ರಾನ್ಸ್ ನ ಹೊರಗೆ ನಿರ್ಮಾಣಗೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಡಸಾಲ್ಟ್ ಏವಿಯೇಶನ್ ನ ಮುಖ್ಯ ಕಾಯಾನಿರ್ವಹಣಾಧಿಕಾರಿ ಎರಿಕ್ ಟ್ರಾಪಿಯರ್ ಹೇಳಿದರು.
ಭಾರತೀಯ ನೌಕಾ ಪಡೆಗೆ ಸುಮಾರು 63,000 ಕೋಟಿ ರೂ. ವೆಚ್ಚದಲ್ಲಿ 26 ನೌಕಾಪಡೆ ಮಾದರಿ ರಫೇಲ್ ಯುದ್ಧ ವಿಮಾನಗಳನ್ನು ಪೂರೈಸುವ ಮಹತ್ವದ ಒಪ್ಪಂದವೊಂದಕ್ಕೆ ಕಳೆದ ತಿಂಗಳು ಭಾರತ ಮತ್ತು ಫ್ರಾನ್ಸ್ ಸಹಿ ಹಾಕಿರುವುದನ್ನು ಸ್ಮರಿಸಬಹುದಾಗಿದೆ.







