ಐಸಿಎಆರ್ನಲ್ಲಿ ದತ್ತಾಂಶ ಸೋರಿಕೆ : ಪ್ರಮುಖ ನೇಮಕಾತಿ, ಕೃಷಿ ಸಂಶೋಧನಾ ಯೋಜನೆಗಳಿಗೆ ಸಂಬಂಧಿಸಿದ ನಿರ್ಣಾಯಕ ದತ್ತಾಂಶ ಕಣ್ಮರೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ದೇಶದ ಅತ್ಯುನ್ನತ ಸಂಶೋಧನಾ ಸಂಸ್ಥೆಯಾದ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)ಯ ಮಹತ್ವದ ದತ್ತಾಂಶ ಸೋರಿಕೆಯಾಗಿದೆ. ಇದರಿಂದ ನೇಮಕಾತಿ, ಸಂಶೋಧನಾ ಯೋಜನೆಗಳ ವಿವರಗಳು ಸೇರಿದಂತೆ ನಿರ್ಣಾಯಕ ದತ್ತಾಂಶ ಕಣ್ಮರೆಯಾಗಿದೆ ಎಂದು Indian express ವರದಿ ಮಾಡಿದೆ.
ಜುಲೈ 7ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ಐಸಿಎಆರ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ನಂತರ ಡಾ.ಡಿ.ಕೆ.ಯಾದವ ಅವರ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ದತ್ತಾಂಶ ಸುರಕ್ಷತೆಯನ್ನು ಹೇಗೆ ಸುಧಾರಿಸುವುದು ಮತ್ತು ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಸಲಹೆಗಳನ್ನು ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ಜುಲೈ 31ರೊಳಗೆ ಈ ಕುರಿತ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ಆದರೆ, ಸಮಿತಿಯು ಇನ್ನೂ ತನ್ನ ಮೊದಲ ಸಭೆಯನ್ನು ನಡೆಸಿಲ್ಲ ಎಂದು ಓರ್ವ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಿಲ್ಲಿಯಲ್ಲಿರುವ ICARನ ಮುಖ್ಯ ಸರ್ವರ್ ಮತ್ತು ಹೈದರಾಬಾದ್ನಲ್ಲಿರುವ NAARM (ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಮ್ಯಾನೇಜ್ಮೆಂಟ್) ನಲ್ಲಿರುವ ರೆಪ್ಲಿಕೇಶನ್ ಸರ್ವರ್ಅನ್ನು ಹ್ಯಾಕರ್ಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಾಂತ್ರಿಕ ಅಧಿಕಾರಿಗಳಿಂದ ಹಿಡಿದು ಉಪ ಮಹಾನಿರ್ದೇಶಕರವರೆಗಿನ ಹುದ್ದೆಗಳಿಗೆ ನೇಮಕಾತಿ ವಿವರಗಳನ್ನು ಒಳಗೊಂಡ ದತ್ತಾಂಶಗಳು, ಹಲವಾರು ಯೋಜನೆಗಳ ಮಾಹಿತಿ, ಇಮೇಲ್ ಪತ್ರವ್ಯವಹಾರಗಳು, ಎಎಸ್ಆರ್ಬಿ (ASRB), ಐಎಎಸ್ಆರ್ಐ(IASRI), ಮತ್ತು ಎನ್ಎಎಆರ್ಎಂ(NAARM) ಸೇರಿದಂತೆ ಪ್ರಮುಖ ಇಲಾಖೆಗಳಿಗೆ ಸಂಬಂಧಿಸಿದ ದತ್ತಾಂಶ, ನೇಮಕಾತಿ, ಸಂಶೋಧನೆ, ಹಣಕಾಸು ಮತ್ತು ಆಡಳಿತಕ್ಕೆ ಸಂಬಂಧಿಸಿದ ನಿರ್ಣಾಯಕ ಮಾಹಿತಿ ಕಣ್ಮರೆಯಾಗಿದೆ ಎಂದು ಹಿರಿಯ ಐಸಿಎಆರ್ ವಿಜ್ಞಾನಿ ದೃಢಪಡಿಸಿದ್ದಾರೆ.







