ಐದನೆಯ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ; ಸುರಂಗದಲ್ಲಿ ಸಿಲುಕಿಕೊಂಡಿರುವವರಿಗೆ ಆಹಾರ ಮತ್ತು ಔಷಧ ಪೂರೈಕೆ
Photo: PTI
ಹೊಸದಿಲ್ಲಿ: ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯಲ್ಲಿ ಸಂಭವಿಸಿದ ಸುರಂಗ ಕುಸಿತ ಘಟನೆಯಲ್ಲಿ ಅದರ ಅವಶೇಷಗಳಡಿ ಸಿಲುಕಿರುವ 40 ಮಂದಿ ಕಾರ್ಮಿಕರನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆಯು ಇಂದಿಗೆ ಐದನೆಯ ದಿನಕ್ಕೆ ಪ್ರವೇಶಿಸಿದೆ. ಕಳೆದ 96 ಗಂಟೆಗಳಿಂದ ಆ ಕಾರ್ಮಿಕರು ಸುರಂಗದೊಳಗೇ ಸಿಲುಕಿಕೊಂಡಿದ್ದಾರೆ.
ನವೆಂಬರ್ 12ರಂದು ಸಿಲ್ಕ್ಯಾರ ಸುರಂಗ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸುರಂಗವು ಕುಸಿತವಾಗಿದ್ದು, ಅದರ ಅವಶೇಷಗಳಡಿ 40 ಮಂದಿ ನಿರ್ಮಾಣ ಕಾಮಗಾರಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ.
ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ಅಗತ್ಯ ವಸ್ತುಗಳಾದ ಆಹಾರ ಮತ್ತು ಔಷಧಗಳನ್ನು ಪೂರೈಸಲಾಗುತ್ತಿದೆ. ರಕ್ಷಣಾ ತಂಡಗಳು ಆ ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಬದುಕುಳಿಯುವ ಆಸೆ ಹಾಗೂ ಚೈತನ್ಯವು ಮುದುಡಿ ಹೋಗದಿರುವಂತೆ ಖಾತ್ರಿಗೊಳಿಸುವ ಪ್ರಯತ್ನದಲ್ಲಿ ತೊಡಗಿವೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿನ ತೊಡಕು ಹಾಗೂ ಸವಾಲುಗಳ ಕುರಿತು NDTV ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಡಾ. ಸುಧೀರ್ ಕೃಷ್ಣ, ಕಾರ್ಮಿಕರನ್ನು ರಕ್ಷಿಸಲು ಇರುವ ಹಲವಾರು ತೊಡಕುಗಳು ಹಾಗೂ ಸವಾಲುಗಳ ಕುರಿತು ಮಾಹಿತಿ ನೀಡಿದ್ದಾರೆ.
“ಹಿಮಾಲಯ ಪ್ರದೇಶವು ಸಾಮಾನ್ಯವಾಗಿ ಮೃದು ಕಲ್ಲುಗಳನ್ನು ಹೊಂದಿದೆ. ಹೊದಿಕೆಯ ರೂಪದಲ್ಲಿ ಮಾತ್ರ ಅಲ್ಲಲ್ಲಿ ಸ್ಥಿರ ಕಲ್ಲುಗಳಿವೆ. ಇದು ಸಮಸ್ಯಾತ್ಮಕ ಪರಿಸ್ಥಿತಿಯಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವಾರು ಸವಾಲುಗಳಿದ್ದು, ಈ ಪೈಕಿ ಭೂಕುಸಿತ ಒಂದಾಗಿದ್ದರೆ, ಸುರಂಗ ಕುಸಿಯುವುದು ಎರಡನೆಯ ಸವಾಲು” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.