ದಿಲ್ಲಿ ವಿವಿ ವಿದ್ಯಾರ್ಥಿನಿ ಮೃತದೇಹ ಯಮುನಾ ನದಿಯಲ್ಲಿ ಪತ್ತೆ ಪ್ರಕರಣ : ಸಿಸಿಟಿವಿ ನಿಷ್ಕ್ರಿಯತೆ, ನ್ಯಾಯ ವ್ಯಾಪ್ತಿ ಗೊಂದಲದ ಬಗ್ಗೆ ಆಘಾತ ವ್ಯಕ್ತಪಡಿಸಿದ ಕುಟುಂಬ

ಸ್ನೇಹಾ ದೇಬ್ನಾಥ್ (Photo credit: indiatoday.in)
ಹೊಸದಿಲ್ಲಿ : ಆರು ದಿನಗಳಿಂದ ನಾಪತ್ತೆಯಾಗಿದ್ದ ದಿಲ್ಲಿ ವಿವಿ ವಿದ್ಯಾರ್ಥಿನಿ ಸ್ನೇಹಾ ದೇಬ್ನಾಥ್ ಮೃತದೇಹ ಯಮುನಾ ನದಿಯಲ್ಲಿ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಸ್ನೇಹಾ ಕುಟುಂಬ ಸಿಗ್ನೇಚರ್ ಸೇತುವೆಯ ಸುತ್ತಲಿನ ಸಿಸಿಟಿವಿಗಳ ನಿಷ್ಕ್ರಿಯತೆ ಮತ್ತು ನ್ಯಾಯ ವ್ಯಾಪ್ತಿಯ ಗೊಂದಲದ ಬಗ್ಗೆ ಆಘಾತ ವ್ಯಕ್ತಪಡಿಸಿದೆ.
ಸ್ನೇಹಾ ದೇಬ್ನಾಥ್ ದಿಲ್ಲಿಯ ಸಿಗ್ನೇಚರ್ ಸೇತುವೆ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಮೊದಲು ಈ ಸೇತುವೆ ಬಳಿ ಇಂತದ್ದೇ ಘಟನೆ ನಡೆದಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ನೇಹಾ ಕುಟುಂಬಸ್ಥರು ಮತ್ತು ಸ್ನೇಹಿತರು ಆರೋಪಿಸಿದ್ದಾರೆ.
ʼಸಿಗ್ನೇಚರ್ ಸೇತುವೆಯಂತಹ ಹೆಚ್ಚಿನ ಅಪಾಯದ ಪ್ರದೇಶದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಇದು ಸ್ವೀಕಾರಾರ್ಹವಲ್ಲ. ಸ್ನೇಹಾ ನಾಪತ್ತೆಯಾಗಿದ್ದಳು. ಆಕೆ ಎಲ್ಲಿ ನಾಪತ್ತೆಯಾಗಿದ್ದಾಳೆ ಎಂಬ ಬಗ್ಗೆ ನಮಗೆ ಯಾವುದೇ ಸುಳಿವುಗಳಿರಲಿಲ್ಲ. ಸಿಸಿಟಿವಿ ನಿಷ್ಕ್ರಿಯತೆಯಿಂದ ಪ್ರಮುಖ ಸಾಕ್ಷಿಯಾದ ವೀಡಿಯೊ ದೃಶ್ಯಗಳು ಲಭ್ಯವಿರಲಿಲ್ಲ. ಇದಲ್ಲದೆ ಸಿಗ್ನೇಚರ್ ಸೇತುವೆ 4 ರಿಂದ 5 ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುತ್ತದೆ. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮತ್ತು ಸಮನ್ವಯದ ಕೊರತೆಗೆ ಕಾರಣವಾಗುತ್ತದೆʼ ಎಂದು ಸ್ನೇಹಾ ಕುಟುಂಬಸ್ಥರು ಹೇಳಿದ್ದಾರೆ.
ಆದ್ದರಿಂದ ಸಿಗ್ನೇಚರ್ ಬ್ರಿಡ್ಜ್ನಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ತಕ್ಷಣ ಸರಿಪಡಿಸಬೇಕು. ಆ ಪ್ರದೇಶ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಸ್ಪಷ್ಟವಾಗಿ ಗೊತ್ತುಪಡಿಸಬೇಕು. ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.







