ಕೆಮ್ಮಿನ ಸಿರಪ್ನಿಂದ ಸಾವುಗಳು | ಕೇಂದ್ರೀಯ ಸಮಿತಿಯಿಂದ ತನಿಖೆಗೆ ಎಫ್ಎಐಎಂಎ ಆಗ್ರಹ

Photo Credit : PTI
ಹೊಸದಿಲ್ಲಿ,ಅ.8: ಕಲುಷಿತ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳ ಸಾವುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು(ಎಫ್ಎಐಎಂಎ), ಪ್ರಕರಣಗಳ ತನಿಖೆಗಾಗಿ ಕೇಂದ್ರೀಯ ಸಮಿತಿಯನ್ನು ರಚಿಸುವಂತೆ ಬುಧವಾರ ಆರೋಗ್ಯ ಸಚಿವಾಲಯವನ್ನು ಆಗ್ರಹಿಸಿದೆ.
ತಮಿಳುನಾಡಿನ ಕಾಂಚೀಪುರಂ ಮೂಲದ ಶ್ರೀಸನ್ ಫಾರ್ಮಾಸ್ಯೂಟಿಕಲ್ಸ್ ನ ತಯಾರಿಕೆಯ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ 20 ಮಕ್ಕಳ ಸಾವುಗಳಿಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯು ಮಕ್ಕಳ ಔಷಧಿಗಳ ಸುರಕ್ಷತೆ, ಗುಣಮಟ್ಟ, ತಯಾರಿಕೆ ಮತ್ತು ವಿತರಣೆಗೆ ಸಂಬಂಧಿಸಿದ ಮೇಲ್ವಿಚಾರಣಾ ಕಾರ್ಯವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿರುವ ಎಫ್ಎಐಎಂಎ, ಘಟನೆಯ ಕುರಿತು ವಿವರವಾದ ಮತ್ತು ನಿಷ್ಪಕ್ಷ ತನಿಖೆಗಾಗಿ ಕೇಂದ್ರೀಯ ತನಿಖಾ ಸಮಿತಿಯನ್ನು ರಚಿಸುವಂತೆ ಆರೋಗ್ಯ ಸಚಿವಾಲಯವನ್ನು ಕೋರಿದೆ.
ತನಿಖೆಯು ತಯಾರಿಕೆ, ಗುಣಮಟ್ಟ ಪರೀಕ್ಷೆ ಮತ್ತು ವಿತರಣೆಯ ಎಲ್ಲ ಹಂತಗಳನ್ನು ಒಳಗೊಂಡಿರಬೇಕು ಹಾಗೂ ಪಾರದರ್ಶಕತೆ, ತಟಸ್ಥತೆ ಮತ್ತು ಬಹುಶಿಸ್ತೀಯ ಮೇಲ್ವಿಚಾರಣೆಯನ್ನು ಕಾಯ್ದುಕೊಳ್ಳಲು ಅರ್ಹ ವೈದ್ಯಕೀಯ ತಜ್ಞರು, ಔಷಧಿ ಶಾಸ್ತ್ರಜ್ಞರು ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳು ಸಮಿತಿಯಲ್ಲಿರಬೇಕು ಎಂದು ಅದು ಹೇಳಿದೆ.
ಸಮಿತಿಯು ಸ್ಥಾಪಿತ ಗುಣಮಟ್ಟ ಮಾನದಂಡಗಳ ಅನುಸರಣೆಯನ್ನು ಪರಿಶೀಲಿಸಲು ಮಕ್ಕಳ ಔಷಧಿಗಳು ಹಾಗೂ ಸಿರಪ್ಗಳ ರಾಷ್ಟ್ರವ್ಯಾಪಿ ತಪಾಸಣೆಗಳು ಮತ್ತು ಯಾದೃಚ್ಛಿಕ ಪರೀಕ್ಷೆಗಳನ್ನು ನಡೆಸಬೇಕು ಹಾಗೂ ಕಾರ್ಯಸಾಧ್ಯ ಶಿಫಾರಸುಗಳೊಂದಿಗೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಆಗ್ರಹಿಸಿರುವ ಎಫ್ಎಐಎಂಎ,ಏಕರೂಪದ ಜಾರಿ ಮತ್ತು ಕಣ್ಗಾವಲಿಗಾಗಿ ರಾಜ್ಯ ಔಷಧಿ ನಿಯಂತ್ರಣ ಅಧಿಕಾರಿಗಳು ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ನಡುವೆ ಸಮನ್ವಯವನ್ನು ಬಲಗೊಳಿಸಲು ಕರೆಯನ್ನೂ ನೀಡಿದೆ.
ದೋಷಪೂರಿತ ಕೆಮ್ಮಿನ ಸಿರಪನ್ನು ಶಿಫಾರಸು ಮಾಡಿದ್ದಕ್ಕಾಗಿ ಮಧ್ಯಪ್ರದೇಶದಲ್ಲಿ ವೈದ್ಯರೋರ್ವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಎಫ್ಎಐಎಂಎ,ತನಿಖೆಯು ಪೂರ್ಣಗೊಳ್ಳುವವರೆಗೆ ನೋಂದಾಯಿತ ವೈದ್ಯರನ್ನು ತಪ್ಪಾಗಿ ದೂಷಿಸಲಾಗುವುದಿಲ್ಲ ಅಥವಾ ಕಿರುಕುಳ ನೀಡಲಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಆಗ್ರಹಿಸಿದೆ. ಬಂಧಿತ ವೈದ್ಯರನ್ನು ತಕ್ಷಣ ಬಿಡುಗಡೆಗೊಳಿಸುವಂತೆಯೂ ಅದು ಒತ್ತಾಯಿಸಿದೆ.







