ಟಿವಿ ಚರ್ಚೆಯ ವೇಳೆ ಮುಸ್ಲಿಂ ವ್ಯಕ್ತಿಯನ್ನು ಅಣಕಿಸುವಂತೆ ಸುದ್ದಿ ಸಂಸ್ಥೆಯೊಂದು ಸೂಚಿಸಿತ್ತು: ಮಾಜಿ ಬಿಜೆಪಿ ಸಂಸದ
"ಹಾಗೆ ಮಾಡಿದರೆ ಟಿವಿ ಚರ್ಚೆ ದೊಡ್ಡ ಯಶಸ್ಸಾಗುತ್ತದೆ ಎಂದು ಸೂಚಿಸಿದ್ದ ನಿರೂಪಕ"

ಪ್ರೊ. ರಾಕೇಶ್ ಸಿನ್ಹಾ | PC : newslaundry.com
ಹೊಸದಿಲ್ಲಿ: ಟಿವಿ ಚರ್ಚೆಯ ನೇರ ಪ್ರಸಾರದ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವಂತೆ ಖ್ಯಾತ ಸುದ್ದಿ ವಾಹಿನಿಯೊಂದರ ನಿರೂಪಕನು ನನಗೆ ಸೂಚಿಸಿದ ನಂತರ, ನಾನು ಆ ಟಿವಿಯಲ್ಲಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದೆ ಎಂದು ಇತ್ತೀಚೆಗೆ ಮಾಜಿ ಸಂಸದ ಹಾಗೂ ಆರೆಸ್ಸೆಸ್ ನಾಯಕ ಪ್ರೊ. ರಾಕೇಶ್ ಸಿನ್ಹಾ ಬಹಿರಂಗಪಡಿಸಿದ್ದು, ಇದು ವಿವಾದಕ್ಕೆ ನಾಂದಿ ಹಾಡಿದೆ.
ಟಿವಿ ಚರ್ಚೆಯ ವೇಳೆ ಮುಸ್ಲಿಂ ಪ್ಯಾನೆಲಿಸ್ಟ್ ರ ಗಡ್ಡ ಹಾಗೂ ಟೋಪಿಯನ್ನು ಅಣಕಿಸಿದರೆ, ಟಿವಿ ಚರ್ಚೆ ಮತ್ತಷ್ಟು ಯಶಸ್ವಿಯಾಗುತ್ತದೆ ಎಂದು ಸುದ್ದಿ ನಿರೂಪಕನು ನನಗೆ ಸೂಚಿಸಿದ್ದ ಎಂದೂ ಅವರು ಹೇಳಿದ್ದಾರೆ.
ಬುಧವಾರ ನಡೆದಿದ್ದ “ಇಂದಿನ ಭಾರತದಲ್ಲಿ ಮುಸ್ಲಿಮರ ಭವಿಷ್ಯ” ಸೆಮಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿದ್ದ ಸಿನ್ಹಾ, ಈ ಘಟನೆಯು ನಾನು ಸಂಸದನಾಗುವುದಕ್ಕಿಂತಲೂ ಮುಂಚೆ ಈ ಘಟನೆ ನಡೆದಿತ್ತು” ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಆಡಿಯೊ ತುಣುಕಿನಲ್ಲಿ, “ನಾನು ಟಿವಿ ವಾಹಿನಿಯೊಂದರಿಂದ ಕರೆ ಸ್ವೀಕರಿಸಿದೆ. ನನಗೆ ಸಂಜೆ 4ರಿಂದ 11 ಗಂಟೆವರೆಗೂ ಟಿವಿ ವಾಹಿನಿಗಳಲ್ಲಿ ಕುಳಿತುಕೊಳ್ಳುವುದೇ ಕೆಲಸವಾಗಿ ಹೋಗಿದೆ. ಅವರು (ಟಿವಿ ನಿರೂಪಕ) ನಾನು ನಿಮ್ಮೊಂದಿಗೆ ಚರ್ಚೆ ಪ್ರಾರಂಭಿಸುತ್ತೇನೆ ಎಂದು ಹೇಳಿದರು. ಚರ್ಚೆಯು ನನ್ನೊಂದಿಗೆ ಪ್ರಾರಂಭಗೊಂಡು ನನಗೆ ಕೊಂಚ ಪ್ರಾಮುಖ್ಯತೆ ದೊರೆಯುತ್ತದೆ ಎಂಬ ಕಾರಣಕ್ಕೆ ನಾನು ಸಂತೋಷಗೊಂಡೆ” ಎಂದು ಹಿಂದಿಯಲ್ಲಿ ಹೇಳುತ್ತಿರುವುದನ್ನು ಕೇಳಬಹುದಾಗಿದೆ.
ನಾನು ಟಿವಿ ಚರ್ಚೆಯಲ್ಲಿ ಆಕ್ರಮಣಕಾರಿಯಾಗಿರಬೇಕು ಎಂದು ಸುದ್ದಿ ನಿರೂಪಕ ನನಗೆ ತಿಳಿಸಿದ. “ನಾನು ನನ್ನ ಸ್ನೇಹಿತ ಅನ್ಸರ್ ರಝಾಲಿಯೊಂದಿಗೆ ಮಾತನಾಡಿದ್ದೇನೆ. ಆತ ಏನು ಮಾತನಾಡಬೇಕು ಎಂದು ನಾನು ಆತನಿಗೆ ಹೇಳಿದ್ದೇನೆ. ನೀವು ಸ್ವಲ್ಪ ಶಾಂತಚಿತ್ತರಾಗಿದ್ದು, ನೀವು ಕೊಂಚ ಆಕ್ರಮಣಕಾರಿಯಾಗಬೇಕಿದೆ ಎಂದು ಆತ ನನಗೆ ಸೂಚಿಸಿದ” ಎಂದೂ ಸಿನ್ಹಾ ಬಹಿರಂಗಪಡಿಸಿದ್ದಾರೆ.
“ನೀವು ಮುಸ್ಲಿಂ ಪ್ಯಾನೆಲಿಸ್ಟ್ ರ ಟೋಪಿ ಹಾಗೂ ಗಡ್ಡದ ಕುರಿತು ಅಸಭ್ಯ ಹಾಗೂ ನಿಂದನಾತ್ಮಕ ಪದ ಬಳಸಬೇಕು. ಅದಕ್ಕೆ ನಾನು, ಇನ್ನೇನು ಹೇಳಬೇಕು, ಅದನ್ನೂ ಹೇಳಿ ಎಂದು ಕೇಳಿದೆ. ನಾನು ಆತನಿಗೆ ಅರ್ಧ ಗಂಟೆಯ ನಂತರ ಮತ್ತೊಮ್ಮೆ ಮಾತನಾಡಿ, ಈ ಪದಗಳು ಸಾಕಾಗುವುದಿಲ್ಲ. ನಾನು ಇನ್ನೂ ಪ್ರಬಲವಾದ ಭಾಷೆಯನ್ನು ಬಳಸಬೇಕು ಎಂದು ಹೇಳಿದೆ. ಅದಕ್ಕೆ ನಿರೂಪಕನು ನಿಮಗೇನೆನ್ನಿಸುತ್ತದೊ ಅದನ್ನೆಲ್ಲ ಹೇಳಿ, ನೀವಿಬ್ಬರೂ ಕಿತ್ತಾಡಿ ಹಾಗೂ ನಾನು ಮಧ್ಯಪ್ರವೇಶಿಸುತ್ತೇನೆ ಎಂದು ಹೇಳಿದ” ಎಂದೂ ಸಿನ್ಹಾ ಹೇಳುತ್ತಿರುವುದನ್ನು ಆ ಆಡಿಯೊ ತುಣುಕಿನಲ್ಲಿ ಕೇಳಬಹುದಾಗಿದೆ.
ನೀವಿಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆದರೆ, ಚರ್ಚೆಯು ದೊಡ್ಡ ಯಶಸ್ಸಾಗಲಿದೆ ಎಂದೂ ಸುದ್ದಿ ನಿರೂಪಕ ಹೇಳಿದ ಎಂದೂ ಸಿನ್ಹಾ ಹೇಳಿದ್ದಾರೆ.
ಸುದ್ದಿ ವಾಹಿನಿಯು ನನ್ನನ್ನು ನೊಯ್ಡಾ ಸ್ಟುಡಿಯೊಗೆ ಕರೆದೊಯ್ಯಲು ಕಾರನ್ನು ಕಳಿಸಿತು. ನಾನು ಮುಂಬೈಗೆ ತುರ್ತಾದ ಕೆಲಸಕ್ಕೆ ಹೋಗಬೇಕಿರುವುದರಿಂದ ನಾನು ನಿಮ್ಮ ಚರ್ಚೆಗೆ ಗೈರಾಗಲು ಬಯಸಿದ್ದೆ ಎಂದು ಹೇಳಿದೆ. ಅದಕ್ಕೆ ನಿರೂಪಕನು ಅಂತರ ತುರ್ತೇನಿತ್ತು ಎಂದು ಪ್ರಶ್ನಿಸಿದ. ಅದಕ್ಕೆ ನಾನು, “ನಾನು ಸಾಕಷ್ಟು ಉದ್ದವಿದ್ದು, ನೋಡಲೂ ಅಷ್ಟೇನೂ ಕೆಟ್ಟದಾಗಿಲ್ಲ. ನಾನು ಮುಂಬೈಗೆ ತೆರಳಿ ನಟಿಸಲು ಪ್ರಾರಂಭಿಸಬೇಕು. ನಾನು ಬೇರೊಬ್ಬರ ಗಡ್ಡ ಎಳೆದು, ಅವರ ಟೋಪಿ ಕಿತ್ತೆಸೆಯುವ ದೇಶದಲ್ಲಿ ಜನಿಸಿಲ್ಲ ಎಂದು ನಿರೂಪಕನಿಗೆ ಹೇಳಿದೆ” ಎಂದೂ ಅವರು ಮಾತು ಮುಂದುವರಿಸಿದ್ದಾರೆ.
“ನಾನು ಇನ್ನೊಬ್ಬರ ಟೋಕಿ ಕಿತ್ತೆಸೆಯುವವರ ವಿರುದ್ಧ ಹೋರಾಡುತ್ತೇನೆ. ನಾನು ಆರೆಸ್ಸೆಸ್ ನ ಸದಸ್ಯನಾಗಿದ್ದು, ನನಗೆ ನನ್ನ ಜವಾಬ್ದಾರಿ ತಿಳಿದಿದೆ” ಎಂದೂ ಅವರು ಹೇಳಿದ್ದಾರೆ.
2016ರಲ್ಲಿ ನಡೆದ ಈ ಘಟನೆಯ ನಂತರ, ನಾನು ಆ ಸುದ್ದಿ ವಾಹಿನಿಯಲ್ಲಿ ಕಾಣಿಸಿಕೊಳ್ಳುವುದನ್ನು ಸ್ಥಗಿತಗೊಳಿಸಿದೆ ಎಂದು ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಆಗಿರುವ ಸಿನ್ಹಾ ಹೇಳಿದ್ದಾರೆ. ಆದರೆ, ಅವರು ಸುದ್ದಿ ವಾಹಿನಿ ಅಥವಾ ನಿರೂಪಕನ ಹೆಸರನ್ನಾಗಲಿ ಬಹಿರಂಗಪಡಿಸಿಲ್ಲ.
ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆಯಾದ ಆರೆಸ್ಸೆಸ್ ನಲ್ಲಿ ಹಲವಾರು ದಶಕಗಳಿಂದ ಸದಸ್ಯರಾಗಿರುವ ಸಿನ್ಹಾ, ಆರೆಸ್ಸೆಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೇವಾರ್ ಕುರಿತು ಕೃತಿಯೊಂದನ್ನೂ ರಚಿಸಿದ್ದಾರೆ. 2018ರಲ್ಲಿ ಅವರನ್ನು ಬಿಜೆಪಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.
ಸೌಜನ್ಯ: newslaundry.com







