ಬಿಹಾರ ಸಂಪುಟ | ಜೀನ್ಸ್ ಪ್ಯಾಂಟ್ ಧರಿಸಿ ಪ್ರಮಾಣವಚನ ಸ್ವೀಕರಿಸಿದ ದೀಪಕ್ ಪ್ರಕಾಶ್ ಯಾರು?

ಉಪೇಂದ್ರ ಕುಶ್ವಾಹ | PC : indiatoday.in
ಪಾಟ್ನಾ : ರಾಷ್ಟ್ರೀಯ ಲೋಕ ಮೋರ್ಚಾ(ಆರ್ಎಲ್ಎಂ) ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ಪುತ್ರ ದೀಪಕ್ ಪ್ರಕಾಶ್ ಅವರು ನಿತೀಶ್ ಕುಮಾರ್ ಸಂಪುಟಕ್ಕೆ ಅನಿರೀಕ್ಷಿತವಾಗಿ ಸೇರ್ಪಡೆಯಾಗಿ ಸುದ್ದಿಯಲ್ಲಿದ್ದಾರೆ.
36ರ ಹರೆಯದ ದೀಪಕ್ ಪ್ರಕಾಶ್, ನಿತೀಶ್ ಕುಮಾರ್ ಸರಕಾರದ ಏಕೈಕ ಆರ್ಎಲ್ಎಂ ಸಚಿವರಾಗಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ಅಥವಾ ರಾಜ್ಯ ವಿಧಾನಸಭೆಯ ಸದಸ್ಯರಲ್ಲದಿದ್ದರೂ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜೀನ್ಸ್ ಪ್ಯಾಂಟ್ ಧರಿಸಿ ಗಾಂಧಿ ಮೈದಾನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ದೀಪಕ್ ಪ್ರಕಾಶ್ ಯಾರು?
ಉಪೇಂದ್ರ ಕುಶ್ವಾಹ ಅವರ ಪುತ್ರನಾಗಿರುವ ದೀಪಕ್ ಪ್ರಕಾಶ್ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮೊದಲು ಐಟಿ (ತಂತ್ರಜ್ಞಾನ) ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಿದ್ದರು.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 2011ರಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಪದವಿ ಪಡೆದ ದೀಪಕ್ ಪ್ರಕಾಶ್ ಅವರು ರಾಜಕೀಯದಲ್ಲಿ ಸಕ್ರಿಯರಾಗುವ ಮೊದಲು ನಾಲ್ಕು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದರು. ಅವರು ಇತ್ತೀಚೆಗೆ ವಿದೇಶದಿಂದ ವಾಪಾಸ್ಸಾಗಿದ್ದರು ಮತ್ತು ಆರ್ಎಲ್ಎಂ ಪಕ್ಷದಲ್ಲಿನ ಜವಾಬ್ಧಾರಿಗಳನ್ನು ವಹಿಸಿಕೊಳ್ಳುತ್ತಿದ್ದರು.
ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಆರ್ಎಲ್ಎಂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಆರು ಸ್ಥಾನಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿತ್ತು. ಇದರಲ್ಲಿ ಪ್ರಕಾಶ್ ಅವರ ತಾಯಿ ಸ್ನೇಹಲತಾ ಕುಶ್ವಾಹ ಪ್ರತಿನಿಧಿಸುವ ಸಸಾರಾಮ್ ಕ್ಷೇತ್ರ ಕೂಡ ಸೇರಿದೆ. ಸ್ನೇಹಲತಾ ಅವರನ್ನು ಬಿಹಾರ ಸಂಪುಟಕ್ಕೆ ಸೇರಿಸುವ ಬಗ್ಗೆ ನಿರೀಕ್ಷೆಗಳಿದ್ದರೂ, ಅಂತಿಮವಾಗಿ ದೀಪಕ್ ಅವರನ್ನು ಸಂಪುಟಕ್ಕೆ ಸೇರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಪ್ರಕಾಶ್ ಅವರು ಬಿಹಾರದ ಪಂಚಾಯತ್ ರಾಜ್ ಇಲಾಖೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಾವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುತ್ತೇವೆ ಎಂದು ಹೇಳಿದ್ದಾರೆ. ಸಂವಿಧಾನದ ಪ್ರಕಾರ, ಪ್ರಕಾಶ್ ತಮ್ಮ ಸಚಿವ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ರಾಜ್ಯದ ಒಂದು ಸದನದಲ್ಲಿ ಆರು ತಿಂಗಳ ಒಳಗೆ ಸದಸ್ಯತ್ವವನ್ನು ಪಡೆಯಬೇಕಿದೆ.







