ಅಂಬೇಡ್ಕರ್ ಕುರಿತು ಮಾನಹಾನಿಕರ ಹೇಳಿಕೆ; ವಿಶ್ವ ಹಿಂದೂ ಪರಿಷತ್ ನ ಮಾಜಿ ನಾಯಕನ ಬಂಧನ

ಮಣಿಯನ್ | Photo: scroll.in
ಚೆನ್ನೈ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಲ್ಲಿ ವಿಶ್ವ ಹಿಂದೂ ಪರಿಷತ್ (VHP)ನ ತಮಿಳುನಾಡು ಘಟಕದ ಮಾಜಿ ಉಪಾಧ್ಯಕ್ಷ ಮಣಿಯನ್ ಅವರನ್ನು ತಮಿಳುನಾಡು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅಂಬೇಡ್ಕರ್ ಅವರು ಕೇವಲ ಶೀಘ್ರಲಿಪಿಗಾರರಾಗಿದ್ದರು.
ಭಾರತದ ಸಂವಿಧಾನ ರಚನೆಯಲ್ಲಿ ಅವರ ಕೊಡುಗೆ ಏನೂ ಇಲ್ಲ ಎಂದು ಮಣಿಯನ್ ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಬಳಿಕ ಈ ಬಂಧನ ನಡೆದಿದೆ.
ಅಂಬೇಡ್ಕರ್ ಅವರು ನಮಗೆ ಸಂವಿಧಾನ ನೀಡಿದ್ದಾರೆ ಎಂದು ಹುಚ್ಚರು ಮಾತ್ರ ಹೇಳುತ್ತಾರೆ. ಅಂಬೇಡ್ಕರ್ ನಮಗೆ ಸಂವಿಧಾನ ನೀಡಿದ್ದಾರೆ ಎಂದು ಹೇಳುವವರು ತಮ್ಮ ಬುದ್ದಿವಂತಿಕೆಯನ್ನು ಒತ್ತೆ ಇಟ್ಟಿದ್ದಾರೆ. ಎಲ್ಲಾ ಪಕ್ಷಗಳು ಕೂಡ ತಮ್ಮ ಬುದ್ದಿವಂತಿಕೆಯನ್ನು ಒತ್ತೆ ಇಟ್ಟಿವೆ ಎಂದು ಅವರು ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಮಣಿಯನ್ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆದ ಬಳಿಕ ವಿಡುದಲೈ ಚಿರುತೈಗಳ್ ಕಚ್ಚಿ ಪದಾಧಿಕಾರಿ ಸೆಲ್ವಂ ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮಣಿಯನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅನಂತರ ಅವರನ್ನು ಇಲ್ಲಿನ ಅವರ ಮನೆಯಿಂದ ಬಂಧಿಸಿ ಚೆನ್ನೈಯ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.







