ಪಶ್ಚಿಮ ಬಂಗಾಳ | ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಪಕ್ಷಾಂತರ : ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಮುಕುಲ್ ರಾಯ್ | Photo Credit : PTI
ಕೋಲ್ಕತ್ತಾ: 2021ರಲ್ಲಿ ಬಿಜೆಪಿಯಿಂದ ಆಡಳಿತಾರೂಢ ಟಿಎಂಸಿಗೆ ಪಕ್ಷಾಂತರಗೊಂಡಿದ್ದ ಪಶ್ಚಿಮ ಬಂಗಾಳದ ಶಾಸಕ ಮುಕುಲ್ ರಾಯ್ ಅವರ ವಿಧಾನಸಭಾ ಸದಸ್ಯತ್ವವನ್ನು ನಾಲ್ಕು ವರ್ಷಗಳ ನಂತರ ಕಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ.
2020ರ ವಿಧಾನಸಭಾ ಚುನಾವಣೆಯಲ್ಲಿ ನದಿಯಾ ಜಿಲ್ಲೆಯ ಕೃಷ್ಣಾನಗರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಕುಲ್ ರಾಯ್, ಮೊದಲ ಬಾರಿಗೆ ಶಾಸಕರಾಗಿದ್ದರು. ಆದರೆ, ಚುನಾವಣೆ ನಡೆದ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಅವರು ತಮ್ಮ ಮಾತೃ ಪಕ್ಷವಾದ ತೃಣಮೂಲ ಕಾಂಗ್ರೆಸ್ಗೆ ಮರಳಿದ್ದರು.
ಈ ಕುರಿತು ತಮ್ಮ ನಿರ್ಧಾರ ಪ್ರಕಟಿಸಿದ್ದ ವಿಧಾನಸಭಾ ಸ್ಪೀಕರ್ ಬಿಮನ್ ರಾಯ್, ಮುಕುಲ್ ರಾಯ್ ಬಿಜೆಪಿ ಶಾಸಕ ಎಂದು ತೀರ್ಪಿತ್ತಿದ್ದರು. ಆದರೆ, ಅವರ ತೀರ್ಪನ್ನು ಕಲ್ಕತ್ತಾ ಹೈಕೋರ್ಟ್ ವಜಾಗೊಳಿಸಿದೆ.
ಮುಕುಲ್ ರಾಯ್ ಅವರನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದ ತೃಣಮೂಲ ಕಾಂಗ್ರೆಸ್ ಸರಕಾರದ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಹುದ್ದೆಯನ್ನು ಸಾಂಪ್ರದಾಯಿಕವಾಗಿ ವಿರೋಧ ಪಕ್ಷ ಪಾಳಯದ ಸದಸ್ಯರೊಬ್ಬರು ಹೊಂದಿರುತ್ತಾರೆ.
ಹೈಕೋರ್ಟ್ ತೀರ್ಪಿನ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭಾ ವಿಪಕ್ಷ ನಾಯಕ ಸುವೇಂದು ಅಧಿಕಾರಿ, “ಮುಕುಲ್ ರಾಯ್ ಬಿಜೆಪಿ ಶಾಸಕ ಎಂಬ ನಿರ್ಧಾರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಪರವಾಗಿ ಸ್ಪೀಕರ್ ಕೈಗೊಂಡಿದ್ದಾರೆ. ಈ ನಡೆಯು ಸಂವಿಧಾನಕ್ಕೆ ಸವಾಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಮುಕುಲ್ ರಾಯ್, 2012ರಲ್ಲಿ ಡಾ. ಮನಮೋಹನ್ ಸಿಂಗ್ ಸಂಪುಟದಲ್ಲಿ ಸುಮಾರು ಆರು ತಿಂಗಳ ಕಾಲ ಕೇಂದ್ರ ರೈಲ್ವೆ ಸಚಿವರಾಗಿದ್ದರು. ಅಲ್ಲದೆ ಅವರು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರೂ ಆಗಿದ್ದರು.







