ದಿಲ್ಲಿ ತರಗತಿ ಕೋಣೆ ನಿರ್ಮಾಣ ಹಗರಣ | ನಕಲಿ ಬಿಲ್ ಗಳು ಮತ್ತು ಬ್ಯಾಂಕ್ ಖಾತೆಗಳು ಪತ್ತೆ: ಈಡಿ

PC : Enforcement Directorate
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ(ಈಡಿ)ವು ಬುಧವಾರ ನಡೆಸಿದ ವ್ಯಾಪಕ ಶೋಧ ಕಾರ್ಯಾಚರಣೆಗಳಲ್ಲಿ ದಿಲ್ಲಿ ತರಗತಿ ಕೋಣೆ ನಿರ್ಮಾಣದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಗಣನೀಯ ಪ್ರಮಾಣದಲ್ಲಿ ಅಕ್ರಮಗಳ ಪುರಾವೆಗಳನ್ನು ಪತ್ತೆ ಹಚ್ಚಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ),2002ರಡಿ ದಿಲ್ಲಿಯ 37 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.
ದಿಲ್ಲಿ ಸರಕಾರದ ಭ್ರಷ್ಟಾಚಾರ ನಿಗ್ರಹ ಘಟಕವು ಮಾಜಿ ಸಚಿವರಾದ ಮನೀಶ್ ಸಿಸೋದಿಯಾ ಮತ್ತು ಸತ್ಯೇಂದ್ರ ಜೈನ್ ಹಾಗೂ ಇತರರ ವಿರುದ್ಧ ದಾಖಲಿಸಿಕೊಂಡಿರುವ ಎಫ್ ಐ ಆರ್ ನ್ನು ಆಧರಿಸಿ ಈಡಿತನಿಖೆಯನ್ನು ನಡೆಸುತ್ತಿದೆ.
2015 ಮತ್ತು 2023ರ ನಡುವೆ ಲೋಕೋಪಯೋಗಿ ಇಲಾಖೆ(ಪಿಡಬ್ಲ್ಯುಡಿ)ಯಿಂದ ಸುಮಾರು 12,748 ಹೆಚ್ಚುವರಿ ತರಗತಿ ಕೋಣೆಗಳ ನಿರ್ಮಾಣದಲ್ಲಿ 2,000 ಕೋ.ರೂ.ಗೂ ಅಧಿಕ ಮೊತ್ತದ ದುರ್ಬಳಕೆಯಾಗಿದೆ ಎಂಬ ಆರೋಪಕ್ಕೆ ಪ್ರಕರಣವು ಸಂಬಂಧಿಸಿದೆ.
ತನಿಖಾಧಿಕಾರಿಗಳ ಪ್ರಕಾರ ಆರಂಭದಲ್ಲಿ ಅಗತ್ಯವಾಗಿದ್ದ 2,405 ತರಗತಿ ಕೋಣೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಬಳಿಕ ಸೂಕ್ತ ಮಂಜೂರಾತಿ ಅಥವಾ ಆಡಳಿತಾತ್ಮಕ ಒಪ್ಪಿಗೆಯಿಲ್ಲದೆ ತರಗತಿ ಕೋಣೆಗಳ ಸಂಖ್ಯೆಯನ್ನು ಮೊದಲು 7,180ಕ್ಕೆ ಮತ್ತು ನಂತರ 12,748ಕ್ಕೆ ಅನಿಯಂತ್ರಿತವಾಗಿ ಹೆಚ್ಚಿಸಲಾಗಿತ್ತು. ಇದು ಗಮನಾರ್ಹ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿತ್ತು. ಯೋಜನೆಯ ವಿವಿಧ ಹಂತಗಳಲ್ಲಿ ಶೇ.49.03ರವರೆಗೆ ವೆಚ್ಚವು ಏರಿಕೆಯಾಗಿತ್ತು.
ಶೋಧ ಕಾರ್ಯಾಚರಣೆಗಳಲ್ಲಿ ಖಾಸಗಿ ಗುತ್ತಿಗೆದಾರರ ಆವರಣಗಳಲ್ಲಿ ದಿಲ್ಲಿ ಸರಕಾರಕ್ಕೆ ಸೇರಿದ ಮೂಲ ಇಲಾಖಾ ಕಡತಗಳು ಹಾಗೂ ಪಿಡಬ್ಲ್ಯುಡಿ ಇಲಾಖೆಯ ಹೆಸರುಗಳು ಮತ್ತು ಹುದ್ದೆಗಳನ್ನು ಒಳಗೊಂಡ ರಬ್ಬರ್ ಸ್ಟ್ಯಾಂಪ್ಗಳು ಪತ್ತೆಯಾಗಿವೆ ಎಂದು ಈಡಿಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನುಬದ್ಧ ಪಾವತಿಗಳ ಸೋಗಿನಲ್ಲಿ ಸರಕಾರಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಕಾರ್ಮಿಕರ ಹೆಸರುಗಳಲ್ಲಿ ತೆರೆಯಲಾಗಿದ್ದ ಮ್ಯೂಲ್ ಖಾತೆ(ಅಕ್ರಮ ಹಣ ವರ್ಗಾವಣೆಗಾಗಿ ಬೇರೊಬ್ಬರ ಬ್ಯಾಂಕ್ ಖಾತೆಯನ್ನು ಅವರಿಗೆ ಗೊತ್ತಿಲ್ಲದಂತೆ ಬಳಸುವುದು)ಗಳಿಗೆ ಸಂಬಂಧಿಸಿದ 322 ಪಾಸ್ಬುಕ್ಗಳನ್ನೂ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಖರೀದಿ ದಾಖಲೆಗಳನ್ನು ರೂಪಿಸಲು ಮತ್ತು ನಕಲಿ ಖರೀದಿ ಬಿಲ್ ಗಳನ್ನು ಸೃಷ್ಟಿಸಲು ಬಳಕೆಯಾಗಿದ್ದ ಗುತ್ತಿಗೆದಾರರು ಮತ್ತು ಶೆಲ್ ಸಂಸ್ಥೆಗಳ ನಕಲಿ ಲೆಟರ್ಹೆಡ್ಗಳನ್ನೂ ಈಡಿಪತ್ತೆ ಹಚ್ಚಿದೆ. ವಾಸ್ತವದಲ್ಲಿ ಯಾವುದೇ ಮೂಲಸೌಕರ್ಯಗಳನ್ನು ಹೊಂದಿರದ ಅಥವಾ ಕಾರ್ಯಾಚರಣೆಗಳಿಲ್ಲದ ಹಲವಾರು ಡಮ್ಮಿ ಸಂಸ್ಥೆಗಳಿಗೆ ತರಗತಿ ಕೋಣೆಗಳ ನಿರ್ಮಾಣಕ್ಕೆ ಗಣನೀಯ ಪಾವತಿಗಳನ್ನು ತೋರಿಸಲಾಗಿದೆ ಎಂದೂ ಆರೋಪಿಸಲಾಗಿದೆ.
ಸರಕಾರಿ ಇಲಾಖೆಗಳಿಗೆ ಸಲ್ಲಿಸಲಾಗಿದ್ದ ನಕಲಿ ಇನ್ ವಾಯ್ಸ್ ಗಳನ್ನೂ ಈಡಿವಶಪಡಿಸಿಕೊಂಡಿದೆ. ಶೋಧ ಕಾರ್ಯಾಚರಣೆಗಳ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಡಿಜಿಟಲ್ ಪುರಾವೆ ಮತ್ತು ಇತರ ಹಣಕಾಸು ದಾಖಲೆಗಳು ಪ್ರಸ್ತುತ ವಿಧಿವಿಜ್ಞಾನ ಪರೀಕ್ಷೆಗೊಳಪಟ್ಟಿವೆ.
ಪುರಾವೆಗಳು ವ್ಯಾಪಕ ಭ್ರಷ್ಟಾಚಾರ,ಶೆಲ್ ಸಂಸ್ಥೆಗಳ ಬಳಕೆ ಮತ್ತು ಅನ್ಯ ಉದ್ದೇಶಕ್ಕೆ ಸರಕಾರಿ ಹಣದ ದುರ್ಬಳಕೆಯನ್ನು ಬೆಟ್ಟು ಮಾಡಿವೆ ಎಂದು ಈಡಿತಿಳಿಸಿದೆ.







