ದಿಲ್ಲಿ: ಆಸ್ಪತ್ರೆಯಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ ಮಹಿಳೆ ಮೃತ್ಯು
ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಈಶಾನ್ಯ ದಿಲ್ಲಿಯ ಸರಕಾರಿ ಆಸ್ಪತ್ರೆಯೊಂದಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರ ಮೇಲೆ ಅಲ್ಲಿದ್ದ ರೋಗಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದು, ಕೆಲ ದಿನಗಳ ನಂತರ, ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಆದರೆ, ಈ ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಹೆಸರೇಳಲಿಚ್ಛಿಸದ ಪೊಲೀಸ್ ಅಧಿಕಾರಿಗಳ ಪ್ರಕಾರ, ಆಕೆಯ ಸಾವಿಗೂ, ಲೈಂಗಿಕ ದೌರ್ಜನ್ಯಕ್ಕೂ ಯಾವುದೇ ಸಂಬಂಧವಿರುವಂತೆ ಕಂಡು ಬಂದಿಲ್ಲ ಎಂದು ಹೇಳಲಾಗಿದೆ.
ಆರೋಪಿಯನ್ನು ದಿಲ್ಲಿಯ ಕಚ್ಚಿ ಖಜೂರಿ ನಿವಾಸಿ ಮುಹಮ್ಮದ್ ಫಯಾಝ್ ಎಂದು ಗುರುತಿಸಲಾಗಿದ್ದು, ಆತನನ್ನು ತಕ್ಷಣವೇ ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟನೆಯಲ್ಲಿ ಹೇಳಲಾಗಿದೆ.
ಈಶಾನ್ಯ ದಿಲ್ಲಿಯ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಸಂತ್ರಸ್ತೆ ಯುವತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡ ನೆರೆಹೊರೆಯವರು ಆಕೆಯನ್ನು ಕಳೆದ ವಾರ ಜಗ್ ಪರ್ವೇಶ್ ಚಂದ್ರ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಕುರಿತು ಸೋಮವಾರ ಪೊಲೀಸರಿಗೆ ಮಾಹಿತಿ ನೀಡಿದ್ದ ಆಸ್ಪತ್ರೆಯ ಸಿಬ್ಬಂದಿಗಳು ಅದೇ ವಾರ್ಡ್ ನ ಪುರುಷ ರೋಗಿಯೊಬ್ಬ ಸಂತ್ರಸ್ತ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಎಂದು ತಿಳಿಸಿದ್ದರು. ಇದಾದ ಬಳಿಕ ಸಂತ್ರಸ್ತ ಯುವತಿಯನ್ನು ಜಿಟಿಬಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಬುಧವಾರ ಮೃತಪಟ್ಟಿದ್ದಾಳೆ.
“ಸಂತ್ರಸ್ತೆಯ ಸಾವಿಗೆ ನಿಖರ ಕಾರಣವೇನೆಂದು ನಿರ್ಧರಿಸಲು ನಾವು ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ. ನಂತರ, ನಾವು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನ್ಯೂ ಉಸ್ಮಾನ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







