ಜು.1ರಿಂದ ದಿಲ್ಲಿಯಲ್ಲಿ ಜೀವಿತಾವಧಿ ತಲುಪಿದ ವಾಹನಗಳಿಗೆ ಇಂಧನ ಮಾರಾಟ ನಿಷೇಧ, ವಾಹನ ಮಾಲಿಕರು ಕಂಗಾಲು!
ಸಿಕ್ಕಿದ ಬೆಲೆಗೆ ಮಾರಾಟ, ಇಲ್ಲದಿದ್ದರೆ ಗುಜರಿಗೆ ಹಾಕುವುದು ಅನಿವಾರ್ಯ

PC : PTI
ಹೊಸದಿಲ್ಲಿ: ಜುಲೈ 1ರಿಂದ ಜೀವಿತಾವಧಿ(ಇಒಎಲ್)ಯನ್ನು ತಲುಪಿರುವ ವಾಹನಗಳಿಗೆ ಇಂಧನ ಮಾರಾಟವನ್ನು ನಿರಾಕರಿಸಲಾಗುವುದು, ಅವುಗಳ ನೋಂದಣಿಯನ್ನು ರದ್ದುಗೊಳಿಸಲಾಗುವುದು, ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅಥವಾ ಗುಜರಿಗೆ ಹಾಕಬಹುದು ಎಂಬ ಸುದ್ದಿಯು ಹೊರಬಿದ್ದ ಬಳಿಕ ಬಹಳಷ್ಟು ವಾಹನ ಮಾಲಿಕರು ಅವುಗಳನ್ನು ತೊರೆಯಲು ಪರದಾಡುತ್ತಿದ್ದಾರೆ. ಸಂಚಾರ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಸುಮಾರು 100 ತಂಡಗಳು ಇಒಎಲ್ ವಾಹನಗಳನ್ನು ಗುರುತಿಸಲು ಸಜ್ಜಾಗಿದ್ದು, ಇಂತಹ ವಾಹನಗಳನ್ನು ಗುರುತಿಸುವ ತಂತ್ರಜ್ಞಾನವನ್ನು ನಗರದಲ್ಲಿಯ ಎಲ್ಲ 520 ಪೆಟ್ರೋಲ್ ಪಂಪ್ಗಳಲ್ಲಿ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಯ ಮತ್ತು ಅನಿಶ್ಚಿತತೆಯಲ್ಲಿ ಬದುಕುವುದಕ್ಕಿಂತ ತಮ್ಮ ವಾಹನಗಳನ್ನು ತೊರೆಯುವುದೇ ಉತ್ತಮ ಎಂದು ಜನರು ಭಾವಿಸಿದ್ದಾರೆ.
ಆದರೆ ಇದು ತಮ್ಮ ವಾಹನಗಳನ್ನು ತೊರೆಯುವ ಸಮಯ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿಲ್ಲ. ತಮ್ಮ ವಾಹನಗಳು ಇನ್ನೂ ಸುಗಮವಾಗಿ ಓಡುತ್ತಿವೆ ಎಂದು ಹೇಳುತ್ತಿರುವ ಕೆಲವರು,ವಾಹನಗಳ ನಿಷೇಧಕ್ಕಿಂತ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯದಂತಹ ಕ್ರಮಗಳಿಗೆ ಕರೆ ನೀಡಿದ್ದಾರೆ.
ಉದಾಹರಣೆಗೆ ತನ್ನ ಕಾರನ್ನು ಮಾರಾಟ ಮಾಡಿರುವ ಐಟಿ ವೃತ್ತಿಪರ ವರುಣ ಸೂದ್ ಅವರು, ಮಹಾನಗರ ಪಾಲಿಕೆಯ ಅಭಿಯಾನವು ಇಒಎಲ್ ವಾಹನಗಳ ಮಾಲಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಅಲ್ಲದೆ ಅಂತಹ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ನ್ನು ನಿರಾಕರಿಸುವ ಮಾತುಗಳೂ ಕೇಳಿ ಬರುತ್ತಿವೆ. ವಿಪರ್ಯಾಸವೆಂದರೆ ಹೊಸ ವಾಹನಗಳಿಗೆ ಸರಿಯಾಗಿ ಸರ್ವಿಸ್ ಮಾಡಿಸದಿದ್ದರೆ ಅವು ಸುಸ್ಥಿತಿಯಲ್ಲಿರುವ 10 ವರ್ಷ ಹಳೆಯ ಕಾರಿಗಿಂತ ಹೆಚ್ಚಿನ ಹೊಗೆಯನ್ನು ಹೊರಸೂಸುತ್ತವೆ ಎಂದು ಅವರು ಹೇಳಿದರು.
‘ಇಒಎಲ್ ವಾಹನಗಳಿಗೆ ಸಂಬಂಧಿಸಿದಂತೆ ಮುಂಬರುವ ಕಠಿಣ ನಿಯಮಗಳಿಗೆ ಅಂಜಿ ನಾನು ಇತ್ತೀಚಿಗೆ ನನ್ನ ಕಾರನ್ನು ಮಾರಾಟ ಮಾಡಿದ್ದೇನೆ. ಒಂದು ವರ್ಷ ಬಾಕಿಯಿತ್ತು,ಆದರೂ ಒಂಭತ್ತನೇ ವರ್ಷದಲ್ಲೇ ನಾನು ಕಾರು ಮಾರಾಟ ಮಾಡಿದ್ದೇನೆ. ನಂತರ ಈಗ ಸಿಕ್ಕ ಬೆಲೆಯೂ ಸಿಗುವುದಿಲ್ಲ. ಅಲ್ಲದೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಕಾರು ಸಂಪೂರ್ಣವಾಗಿ ಸುಸ್ಥಿತಿಯಲ್ಲಿತ್ತು. ಇಂತಹ ನಿಯಮದ ಬದಲು ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸುವುದು ಅಗತ್ಯ ಎಂದು ನಾನು ಭಾವಿಸಿದ್ದೇನೆ ’ಎಂದು ಕಾಲೇಜು ಪ್ರಾಧ್ಯಾಪಕ ವಿನೀತ್ ಮಲ್ಹೋತ್ರಾ ಹೇಳಿದರು.
ಬಕ್ಷಿ ಟ್ರಾನ್ಸ್ಪೋರ್ಟ್ ಸರ್ವಿಸ್ ಲಿ.ನ ಎಂಡಿ ಬಾಬಿ ಕೆ.ಎಸ್.ಸಾಹ್ನಿ ಅವರದೂ ಇದೇ ಕಥೆ. ಅವರ ಮರ್ಸಿಡಿಸ್ ಕಾರಿಗೆ 10 ವರ್ಷಗಳು ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಬಾಕಿಯಿದ್ದವು. ಅದನ್ನು ಅವರು ಹೆಚ್ಚು ದೂರ ಓಡಿಸಿಯೂ ಇರಲಿಲ್ಲ. 88 ಲಕ್ಷ ರೂ.ಬೆಲೆಯ ಮರ್ಸಿಡಿಸ್ ಕಾರನ್ನು ಅವರು ಕೇವಲ ಏಳು ಲಕ್ಷ ರೂ.ಗೆ ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾರೆ.
ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಪ್ರಕಾರ ದಿಲ್ಲಿಯಲ್ಲಿ 62 ಲ.ಇಒಎಲ್ ವಾಹನಗಳಿದ್ದು,ಈ ಪೈಕಿ 41 ಲ.ದ್ವಿಚಕ್ರ ವಾಹನಗಳಾಗಿವೆ. 2024ರಲ್ಲಿ ದಿಲ್ಲಿಯಲ್ಲಿ 39,273 ಇಒಎಲ್ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಜೀವಿತಾವಧಿ ಅಂತ್ಯ ನೀತಿಯನ್ನು ಸಾಕಷ್ಟು ಅಧ್ಯಯನಗಳನ್ನು ನಡೆಸದೆ ಜಾರಿಗೊಳಿಸಲಾಗಿದೆ ಎಂದು ಹೇಳಿದ ಸಾರಿಗೆ ತಜ್ಞ ಅನಿಲ್ ಛಿಕಾರಾ, BS II ಮತ್ತು BS IV ವಾಹನಗಳು ಒಂದೇ ರೀತಿಯಲ್ಲಿ ಹೊಗೆಯನ್ನು ಹೊರಸೂಸುತ್ತವೆ,ಆದರೆ ಹೊರಸೂಸುವಿಕೆ ನಿಯಂತ್ರಣ ಸಂವೇದಕಗಳು ಮತ್ತು ವೇಗವರ್ಧಕ ಪರಿವರ್ತಕಗಳನ್ನು ಹೊಂದಿರುವ ಃS Iಗಿ ವಾಹನಗಳು ಮಾಲಿನ್ಯ ಮಿತಿಯನ್ನು ಮೀರುವುದು ಅಪರೂಪ. ಆದರೂ ಅವುಗಳ ಜೀವಿತಾವಧಿಯ ಆಧಾರದಲ್ಲಿ ಅವನ್ನೂ ಗುಜರಿಗೆ ಹಾಕಲಾಗುತ್ತಿದೆ ಎಂದು ಬೆಟ್ಟು ಮಾಡಿದರು.







