ದಿಲ್ಲಿ | ತಂದೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮಗ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ತಂದೆಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಶುಕ್ರವಾರ ದಿಲ್ಲಿಯ ಪಹಾಡಗಂಜ್ ಪ್ರದೇಶದಲ್ಲಿ ನಡೆದಿದೆ.
ಕೊಲೆಯಾಗಿರುವ ವ್ಯಕ್ತಿಯನ್ನು ವಿನೋದ್ (45) ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಆರೋಪಿ ಪುತ್ರ ಭಾನುಪ್ರತಾಪ್ ನನ್ನು ಬಂಧಿಸಿದ್ದು,ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಕೌಟುಂಬಿಕ ವಿವಾದಗಳಿಂದ ತಂದೆಯೊಂದಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಇಂತಹುದೇ ಜಗಳದ ಸಂದರ್ಭದಲ್ಲಿ ಸಿಟ್ಟಿನ ಭರದಲ್ಲಿ ತಾನು ತಂದೆಯನ್ನು ಕೊಲೆ ಮಾಡಿದ್ದೇನೆ ಎಂದು ಭಾನುಪ್ರತಾಪ್ ತಿಳಿಸಿದ್ದಾನೆ.
ತಮ್ಮ ಮನೆ ಸಮೀಪದ ಪಾರ್ಕ್ನಲ್ಲಿ ಭಾನುಪ್ರತಾಪ್ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದ. ಅವರನ್ನು ನೆಲಕ್ಕೆ ತಳ್ಳಿ ಭಾರೀ ಕಲ್ಲಿನಿಂದ ಅವರ ತಲೆ ಮತ್ತು ಎದೆಗೆ ಹಲವಾರು ಬಾರಿ ಜಜ್ಜಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದರೂ ವಿನೋದ್ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು ಮತ್ತು ಬಳಿಕ ತನ್ನ ಸೋದರಿಗೆ ಹಲ್ಲೆಯ ವಿಷಯವನ್ನು ತಿಳಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.





