ದಿಲ್ಲಿ:11,000 ಕೋ.ರೂ.ವೆಚ್ಚದ ಎರಡು ಹೆದ್ದಾರಿಗಳನ್ನು ಉದ್ಘಾಟಿಸಿದ ಪ್ರಧಾನಿ

ನರೇಂದ್ರಮೋದಿ |PC : @BJP4India
ಹೊಸದಿಲ್ಲಿ,ಆ.17: ರಾಷ್ಟ್ರ ರಾಜಧಾನಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ಸುಮಾರು 11,000 ಕೋ.ರೂ.ಗಳ ವೆಚ್ಚದ ದ್ವಾರಕಾ ಎಕ್ಸ್ಪ್ರೆಸ್ವೇ ಮತ್ತು ನಗರ ವಿಸ್ತರಣಾ ರಸ್ತೆ(ಯುಇಆರ್)-IIರ ದಿಲ್ಲಿ ವಿಭಾಗವನ್ನು ಪ್ರಧಾನಿ ನರೇಂದ್ರಮೋದಿಯವರು ರವಿವಾರ ಉದ್ಘಾಟಿಸಿದರು.
Big boost to Delhi-NCR infrastructure. 🛣️
— BJP (@BJP4India) August 17, 2025
PM Modi inaugurated two National Highway projects worth Rs 11,000 crore in Delhi today. pic.twitter.com/ArPEFNkcOb
ದಿಲ್ಲಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಸಂಪರ್ಕ ಸುಧಾರಣೆ,ಪ್ರಯಾಣದ ಅವಧಿ ಕಡಿತ ಮತ್ತು ವಾಹನ ದಟ್ಟಣೆಯನ್ನು ತಗ್ಗಿಸುವ ಉದ್ದೇಶದೊಂದಿಗೆ ಸರಕಾರದ ಸಮಗ್ರ ಯೋಜನೆಯಡಿ ಈ ಎರಡು ರಸ್ತೆಗಳನ್ನು ನಿರ್ಮಿಸಲಾಗಿದೆ.
ಈ ನೂತನ ಯೋಜನೆಗಳು ಸಂಪೂರ್ಣವಾಗಿ ಕಾರ್ಯಾರಂಭಗೊಂಡ ಬಳಿಕ ಸೋನಿಪತ್,ರೋಹ್ಟಕ್, ಬಹಾದುರಗಡ ಮತ್ತು ಗುರುಗ್ರಾಮದಿಂದ ಇಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಅವಧಿಯು ಗಮನಾರ್ಹವಾಗಿ ತಗ್ಗುವ ನಿರೀಕ್ಷೆಯಿದೆ.
ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಮೋದಿ, ದ್ವಾರಕಾ ಎಕ್ಸ್ಪ್ರೆಸ್ ವೇ ಮತ್ತು ಯುಇಆರ್-II ದಿಲ್ಲಿ-ಎನ್ಸಿಆರ್ ಜನರಿಗೆ ಅನುಕೂಲವನ್ನು ಕಲ್ಪಿಸಲಿವೆ. ದಿಲ್ಲಿಯ ಜನರ ಎಲ್ಲ ತೊಂದರೆಗಳನ್ನು ನಿವಾರಿಸಲು ಸರಕಾರವು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಸರಕಾರವು ದಿಲ್ಲಿಯನ್ನು ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನು ಪ್ರತಿಬಿಂಬಿಸುವ ಬೆಳವಣಿಗೆಯ ಮಾದರಿಯನ್ನಾಗಿ ಮಾಡುತ್ತಿದೆ ಎಂದು ಹೇಳಿದ ಅವರು,ದ್ವಾರಕಾ ಎಕ್ಸ್ಪ್ರೆಸ್ ವೇ ಮತ್ತು ಯುಇಆರ್-IIನ್ನು ಅತ್ಯುತ್ತಮವಾಗಿ ನಿರ್ಮಿಸಲಾಗಿದೆ. ಹೊರವರ್ತುಲ ಎಕ್ಸ್ಪ್ರೆಸ್ವೇ ಅಭಿವೃದ್ಧಿಯ ಬಳಿಕ ಈಗ ಯುಇಆರ್ ದಿಲ್ಲಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡಲಿದೆ ಎಂದರು.
ನಗರದಲ್ಲಿ ಹೆಚ್ಚುತ್ತಿರುವ ತ್ಯಾಜ್ಯಸಮಸ್ಯೆಯನ್ನು ಪರಿಹರಿಸುವಲ್ಲಿ ನಗರ ವಿಸ್ತರಣಾ ರಸ್ತೆಯ
ವಿಶಿಷ್ಟ ಕೊಡುಗೆಯೇ ಅದನ್ನು ವಿಭಿನ್ನವಾಗಿಸಿದೆ ಎಂದು ಹೇಳಿದ ಮೋದಿ,ಅದರ ನಿರ್ಮಾಣಕ್ಕಾಗಿ ಮಿಲಿಯಗಟ್ಟಲೆ ಟನ್ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ಸುಸ್ಥಿರ ರೀತಿಯಲ್ಲಿ ಮರುಬಳಕೆ ಮಾಡಲಾಗಿದೆ. ಈ ವಿನೂತನ ವಿಧಾನವು ತ್ಯಾಜ್ಯಗಳ ರಾಶಿಗಳನ್ನು ಕಡಿಮೆಗೊಳಿಸುವ ಜೊತೆಗೆ ತ್ಯಾಜ್ಯವನ್ನು ಮೂಲಸೌಕರ್ಯ ಅಭಿವೃದ್ಧಿಗಾಗಿ ಅಮೂಲ್ಯ ಸಂಪನ್ಮೂಲವನ್ನಾಗಿ ಪರಿವರ್ತಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು,ಇವೆರಡು ಯೋಜನೆಗಳು ದಿಲ್ಲಿಯಲ್ಲಿ ಸಂಚಾರ ದಟ್ಟಣೆಯನ್ನು ಶೇ.50ರಷ್ಟು ಕಡಿಮೆ ಮಾಡಲಿವೆ ಎಂದು ಹೇಳಿದರು.
ದ್ವಾರಕಾ ಎಕ್ಸ್ಪ್ರೆಸ್ವೇ ಪರಿಶೀಲನೆ ಸಂದರ್ಭದಲ್ಲಿ ಮೋದಿ ಕಾರ್ಮಿಕರೊಂದಿಗೆ ಸಂವಾದವನ್ನು ನಡೆಸಿದರು.
ದಿಲ್ಲಿಯ ಮುಂಡ್ಕಾ-ಬಕರ್ವಾಲಾ ಗ್ರಾಮದ ಟೋಲ್ಪ್ಲಾಝಾದಲ್ಲಿ ರೋಡ್ ಶೋ ಅನ್ನು ಕೂಡ ಅವರು ನಡೆಸಿದರು.







