ದಿಲ್ಲಿ | ವಿದ್ಯಾರ್ಥಿನಿಯನ್ನು ಹಿಂಬಾಲಿಸಿ, ಆಕೆಯ ಮೇಲೆ ಆ್ಯಸಿಡ್ ಎರಚಿದ ದುಷ್ಕರ್ಮಿಗಳು!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಒಂದು ತಿಂಗಳ ಹಿಂದೆ ಪರಸ್ಪರ ನಡೆದಿದ್ದ ಮಾತಿನ ಚಕಮಕಿಗೆ ಪ್ರತೀಕಾರವಾಗಿ, 20 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿರುವ ಮೂವರು ದುಷ್ಕರ್ಮಿಗಳು, ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ದಿಲ್ಲಿಯ ಮುಕುಂದ್ ಪುರ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಸಂತ್ರಸ್ತೆಯನ್ನು ಅಶೋಕ್ ವಿಹಾರ್ ನಲ್ಲಿರುವ ಲಕ್ಷ್ಮಿಬಾಯಿ ಕಾಲೇಜಿನ ಎರಡನೆ ವರ್ಷದ ಪದವಿ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಆಕೆ ಕಾಲೇಜಿನತ್ತ ತೆರಳುತ್ತಿದ್ದಾಗ, ಮುಕುಂದ್ ಪುರ್ ನಿವಾಸಿಯಾದ ಜಿತೇಂದರ್ ಎಂಬ ಪರಿಚಿತ ಯುವಕನೊಬ್ಬ ತನ್ನ ಸಹಚರರಾದ ಇಶಾನ್ ಮತ್ತು ಅರ್ಮಾನ್ ನೊಂದಿಗೆ ಆಕೆಯನ್ನು ಹಿಂಬಾಲಿಸಿದ್ದಾನೆ.
ಸಂತ್ರಸ್ತೆ ನೀಡಿರುವ ಹೇಳಿಕೆಯ ಪ್ರಕಾರ, ಇಶಾನ್ ಬಾಟಲಿಯೊಂದನ್ನು ಅರ್ಮಾನ್ ಗೆ ಹಸ್ತಾಂತರಿಸಿದ. ಆತ ನನ್ನ ಮೇಲೆ ಆ್ಯಸಿಡ್ ಎರಚಿದ. ನಾನು ನನ್ನ ಕೈಗಳಿಂದ ನನ್ನ ಮುಖವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದೆನಾದರೂ, ಅದರಿಂದ ನನ್ನ ಎರಡು ಕೈಗಳಿಗೂ ಸುಟ್ಟು ಗಾಯಗಳಾದವು ಎಂದು ಹೇಳಿದ್ದಾರೆ ಎಂದು ಆಕೆಯನ್ನು ಉಲ್ಲೇಖಿಸಿ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆ್ಯಸಿಡ್ ದಾಳಿಯ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳ ಪೈಕಿ ಜಿತೇಂದರ್ ಎಂಬಾತ ನನ್ನನ್ನು ಪ್ರತಿ ನಿತ್ಯ ಹಿಂಬಾಲಿಸುತ್ತಿದ್ದ. ಇದು ನಮ್ಮಿಬ್ಬರ ನಡುವೆ ಒಂದು ತಿಂಗಳ ಹಿಂದೆ ಬಿಸಿಬಿಸಿ ಮಾತಿನ ಚಕಮಕಿಗೆ ಕಾರಣವಾಗಿತ್ತು ಎಂದೂ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದಾರೆ.
ಸದ್ಯ ಆಕೆಯನ್ನು ದೀಪ್ ಚಂದ್ ಬಂಧು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಸಂಬಂಧ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.







