ದಿಲ್ಲಿ ಮತ್ತೊಮ್ಮೆ ಅತ್ಯಂತ ಕಲುಷಿತ ನಗರ: CREA

Photo Credit : PTI
ಹೊಸದಿಲ್ಲಿ,ನ.26: ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿಲ್ಲಿ ಅತ್ಯಂತ ಕಲುಷಿತವಾಗಿದೆ ಎಂದು ಸೆಂಟರ್ ಫಾರ್ ರೀಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (CREA) ಬಿಡುಗಡೆಗೊಳಿಸಿರುವ ಹೊಸ ಉಪಗ್ರಹ ಆಧಾರಿತ ಮೌಲ್ಯಮಾಪನ ವರದಿಯು ಹೇಳಿದೆ.
ದಿಲ್ಲಿಯು ವಾರ್ಷಿಕವಾಗಿ ಪ್ರತಿ ಘನ ಮೀಟರ್ ಗೆ 101 ಮೈಕ್ರೋಗ್ರಾಂ ಪಿಎಂ2.5 ಸಾಂದ್ರತೆಯನ್ನು ದಾಖಲಿಸಿದ್ದು, ಇದು ದೇಶದ ರಾಷ್ಟ್ರೀಯ ಪರಿಸರ ವಾಯು ಗುಣಮಟ್ಟ ಮಾನದಂಡಕ್ಕಿಂತ 2.5 ಪಟ್ಟು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ 20 ಪಟ್ಟು ಅಧಿಕವಾಗಿದೆ.
ದಿಲ್ಲಿಯನ್ನು ಒಳಗೊಂಡಿರುವ ಸಿಂಧೂ-ಗಂಗಾ ವಾಯು ವಲಯದಲ್ಲಿ ಅತ್ಯಧಿಕ ಮಾಲಿನ್ಯ ಮಟ್ಟಗಳು ಮುಂದುವರಿದಿವೆ ಎಂದು CREA ಅಧ್ಯಯನವು ಸೂಚಿಸಿದೆ. ವಾಯುವಲಯವು ಸಾಮಾನ್ಯ ಹವಾಮಾನ ಮತ್ತು ಸ್ಥಳಾಕೃತಿಯಿಂದಾಗಿ ಒಂದೇ ರೀತಿಯ ವಾಯು ಗುಣಮಟ್ಟವನ್ನು ಹೊಂದಿರುವ ಭೌಗೋಳಿಕ ಪ್ರದೇಶವಾಗಿದ್ದು, ಇದು ಮಾಲಿನ್ಯಕಾರಕಗಳನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಪ್ರದೇಶದಾದ್ಯಂತ ಹರಡುತ್ತದೆ.
ಸಾಂಪ್ರದಾಯಿಕವಾಗಿ, ತುಲನಾತ್ಮಕವಾಗಿ ಪರಿಗಣಿಸಲಾಗಿರುವ ಈಶಾನ್ಯ ಭಾರತವು ಕಳವಳಕಾರಿಯಾಗಿ ಮಾರ್ಪಡುತ್ತಿದ್ದು, ಅಸ್ಸಾಂ-ತ್ರಿಪುರಾ ವಾಯುವಲಯವು ನಿರಂತರವಾಗಿ ಹೆಚ್ಚಿನ ಮಾಲಿನ್ಯಕಾರಕಗಳ ಸಾಂದ್ರತೆಯನ್ನು ತೋರಿಸುತ್ತಿದೆ ಮತ್ತು ಸಿಂಧೂ-ಗಂಗಾ ಬಯಲು ಪ್ರದೇಶದ ಬಳಿಕ ಎರಡನೇ ಅತ್ಯಂತ ಕಲುಷಿತ ವಾಯುವಲಯವಾಗಿ ಬದಲಾಗುತ್ತಿದೆ ಎಂದು CREA ವಿಶ್ಲೇಷಕ ಮನೋಜ್ ಕುಮಾರ್ ಹೇಳಿದ್ದಾರೆ.
ಸಿಂಧೂ-ಗಂಗಾ ಬಯಲು ಪ್ರದೇಶವು ಪಂಜಾಬಿನಿಂದ ಪಶ್ಚಿಮ ಬಂಗಾಳದವರೆಗೆ ವಿಸ್ತರಿಸಿಕೊಂಡಿದೆಯಾದರೂ ಋತುಮಾನವನ್ನು ಅವಲಂಬಿಸಿ ಅದು ಒಂದು ಅಥವಾ ಎರಡು ವಾಯುವಲಯಗಳನ್ನು ಹೊಂದಿರುತ್ತದೆ. ಇದೇ ರೀತಿ ಬದಲಾಗುತ್ತಿರುವ ಋತುಮಾನಗಳೊಂದಿಗೆ ಭಾರತವು 9ರಿಂದ 11ರವರೆಗೆ ಬಹು ವಾಯುವಲಯಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದರು.
ಅಸ್ಸಾಂ ಮತ್ತು ದಿಲ್ಲಿ ದೇಶದ 50 ಅತ್ಯಂತ ಕಲುಷಿತ ಜಿಲ್ಲೆಗಳಲ್ಲಿ ಸುಮಾರು ಅರ್ಧದಷ್ಟು ಪಾಲನ್ನು ಹೊಂದಿದ್ದು, ಹರ್ಯಾಣ ಮತ್ತು ಬಿಹಾರದಂತಹ ರಾಜ್ಯಗಳು ಸಹ ಇವುಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿವೆ. ದೇಶಾದ್ಯಂತ 749 ಜಿಲ್ಲೆಗಳ ಪೈಕಿ 447 ಜಿಲ್ಲೆಗಳು ವಾರ್ಷಿಕ ಪಿಎಂ2.5 ಮಿತಿಯನ್ನು ಉಲ್ಲಂಘಿಸಿವೆ ಎಂದು ವರದಿಯು ಬೆಟ್ಟು ಮಾಡಿದೆ.







