ಉತ್ತರ ಭಾರತದಾದ್ಯಂತ ಶೀತಲ ವಾತಾವರಣ; ದಿಲ್ಲಿಯಲ್ಲಿ 150 ವಿಮಾನಯಾನ ರದ್ದು

Photo Credit :PTI
ಹೊಸದಿಲ್ಲಿ, ಡಿ. 19: ಉತ್ತರ ಭಾರತದ ಹಲವು ಭಾಗಗಳಲ್ಲಿ ಶುಕ್ರವಾರ ಶೀತಲ ಹಾಗೂ ಮಂಜು ಕವಿದ ವಾತಾವರಣ ನೆಲೆಸಿದ್ದು, ದಿಲ್ಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕಳಪೆ ಗೋಚರತೆ ಹಿನ್ನೆಲೆಯಲ್ಲಿ, ಶುಕ್ರವಾರ 79 ಹೊರಹೋಗುವ ವಿಮಾನಗಳು ಮತ್ತು 73 ಒಳಬರುವ ವಿಮಾನಗಳನ್ನು ರದ್ದುಪಡಿಸಲಾಯಿತು. ದಟ್ಟ ಮಂಜಿನಿಂದಾಗಿ ವಿಮಾನಗಳ ಹಾರಾಟಕ್ಕೆ ತೊಂದರೆಯಾಯಿತು ಎಂದು ವಿಮಾನ ನಿಲ್ದಾಣ ತಿಳಿಸಿದೆ. ಆದರೆ, ಗೋಚರತೆ ಸುಧಾರಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿತು.
ಗೋಚರತೆಯಲ್ಲಿನ ಏರಿಳಿತದಿಂದಾಗಿ, ದಿಲ್ಲಿ ರಾಷ್ಟ್ರ ರಾಜಧಾನಿ ವಲಯ, ಅಮೃತಸರ, ಜಬಲ್ಪುರ ಮತ್ತು ಜಲಂಧರ್ ವಿಮಾನ ನಿಲ್ದಾಣಗಳಲ್ಲಿನ ವಿಮಾನ ಹಾರಾಟಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗಿವೆ ಎಂಬ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗಳು ಹೊರಡಿಸಿದವು.
ಈ ನಡುವೆ, ಉತ್ತರ ಭಾರತದಾದ್ಯಂತ ಮಂಜುಕವಿದ ವಾತಾವರಣ ನೆಲೆಸಿರುವ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣಗಳ ಕಾರ್ಯಾಚರಣೆಯಲ್ಲಿ ವಿಳಂಬ ಅಥವಾ ವ್ಯತ್ಯಯ ಉಂಟಾಗಬಹುದು ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.







