ದಿಲ್ಲಿಯಲ್ಲಿ ಅರಳಿದ ಕಮಲ | ದಶಕದ ಆಪ್ ಆಳ್ವಿಕೆ ಅಂತ್ಯ

Photo Credit | PTI
ಹೊಸದಿಲ್ಲಿ : ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್)ವು ಭಾರೀ ಸೋಲು ಅನುಭವಿಸಿದೆ. ಇದರೊಂದಿಗೆ ಒಂದು ದಶಕದ ಆಪ್ ಆಳ್ವಿಕೆ ಅಂತ್ಯಗೊಂಡಿದೆ. 27 ವರ್ಷಗಳ ದೀರ್ಘ ಅವಧಿಯ ಬಳಿಕ ಬಿಜೆಪಿಯು ಅಧಿಕಾರಕ್ಕೆ ಮರಳಿದೆ.
ದಿಲ್ಲಿ ವಿಧಾನಸಭೆಯ ಒಟ್ಟು 70 ಸ್ಥಾನಗಳ ಪೈಕಿ ಬಿಜೆಪಿಯು 48 ಸ್ಥಾನಗಳಲ್ಲಿ ಜಯಗಳಿಸಿದ್ದು, ಸ್ಪಷ್ಟ ಬಹುಮತ ಗಳಿಸಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ 22 ಸ್ಥಾನಗಳನ್ನು ಗೆದ್ದಿದ್ದು ತೀವ್ರ ಹಿನ್ನಡೆ ಕಂಡಿದೆ. ನಿರ್ಗಮನ ವಿಧಾನಸಭೆಯಲ್ಲಿ ಆಪ್ 62 ಸ್ಥಾನಗಳನ್ನು ಹೊಂದಿತ್ತು. ಸತತ ಒಂದು ದಶಕದಿಂದ ದಿಲ್ಲಿಯ ಅಧಿಕಾರ ಸೂತ್ರ ಹಿಡಿದಿದ್ದ ಆಪ್ಗೆ ಈ ಸೋಲು ಆಘಾತಕಾರಿಯಾಗಿದೆ. ಈ ಸಲವೂ ಒಂದೇ ಒಂದು ಸ್ಥಾನವನ್ನು ಪಡೆಯಲು ವಿಫಲವಾಗಿರುವ ಕಾಂಗ್ರೆಸ್ ಪಕ್ಷವು ಧೂಳಿಪಟಗೊಂಡಿದೆ.
ಬಿಜೆಪಿಯು ಗೆಲುವಿನ ಚಂಡಮಾರುತಕ್ಕೆ ಪ್ರಮುಖ ಆಪ್ ನಾಯಕರು ಕೊಚ್ಚಿಹೋಗಿದ್ದಾರೆ.
ಅಷ್ಟೇ ಅಲ್ಲದೆ ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಸಿಂಗ್ ಸೇರಿದಂತೆ ಹಲವು ನಾಯಕರು ಸೋಲುಂಡಿರುವುದು ಆಪ್ ಪಕ್ಷಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೊಸದಿಲ್ಲಿ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಹಾಗೂ ಆಪ್ ನಾಯಕಿ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಿಂದ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಅತಿಶಿ ಅವರು ಬಿಜೆಪಿಯ ಪ್ರಮುಖ ಅಭ್ಯರ್ಥಿ ರಮೇಶ್ ಬಿಧೂರಿ ಮತ್ತು ಕಾಂಗ್ರೆಸ್ನ ಅಲ್ಕಾ ಲಾಂಬಾ ಅವರನ್ನು ಪರಾಭವಗೊಳಿಸಿದ್ದಾರೆ.
ಚುನಾವಣೆಯಲ್ಲಿ ಗಮನಾರ್ಹ ಸಾಧನೆ ತೋರುವ ನಿರೀಕ್ಷೆಯಿರಿಸಿದ್ದ ಕಾಂಗ್ರೆಸ್ ಪಕ್ಷ ಸತತ ಮೂರನೇ ಬಾರಿಯೂ ಒಂದೇ ಒಂದು ಸ್ಥಾನವನ್ನು ಪಡೆಯಲು ವಿಫಲವಾಗಿದೆ.
ಆಪ್ ಹಾಗೂ ಕಾಂಗ್ರೆಸ್ ಮತವಿಭಜನೆಯು ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಯಿತು. ಜಂಗ್ಪುರ, ಗ್ರೇಟರ್ ಕೈಲಾಶ್, ಮಾಳವೀಯ ನಗರ ಸೇರಿದಂತೆ ಕನಿಷ್ಠ 11 ಕ್ಷೇತ್ರಗಳಲ್ಲಿ ಆಪ್ , ಕಾಂಗ್ರೆಸ್ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳ ಸಂಖ್ಯೆ ವಿಜಯಿ ಬಿಜೆಪಿ ಅಭ್ಯರ್ಥಿಗಳಿಗೆ ದೊರೆತ ಮತಗಳಿಗಿಂತಲೂ ಅಧಿಕವಾಗಿತ್ತು.
ಕೇಜ್ರಿವಾಲ್ ಸರಕಾರ ಮದ್ಯ ನೀತಿ ಹಗರಣ ಬಿಜೆಪಿಗೆ ಚುನಾವಣಾ ಅಸ್ತ್ರವಾಗಿ ಬಳಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅರವಿಂದ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಲವು ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಜೈಲಿನಿಂದ ಜಾಮೀನು ಬಿಡುಗಡೆಗೊಂಡ ಆನಂತರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜನಾದೇಶ ದೊರೆತ ಆನಂತರವೇ ತಾನು ಸಿಎಂ ಹುದ್ದೆ ಆಲಂಕರಿಸುವುದಾಗಿ ಅವರು ಘೋಷಿಸಿದ್ದರು.
ಅರವಿಂದ ಕೇಜ್ರಿವಾಲ್ ಅವರು ತನ್ನ ಆಡಳಿತದ ಅವಧಿಯಲ್ಲಿ ಮುಖ್ಯಮಂತ್ರಿ ಬಂಗಲೆಯ ನವೀಕರಣಕ್ಕೆ ಕೋಟ್ಯಾಂತರ ರೂ. ಸಾರ್ವಜನಿಕ ಹಣವನ್ನು ಬಳಸಿದ್ದಾರೆಂದು ಬಿಜೆಪಿ ಆರೋಪಿಸಿತ್ತು. ಚುನಾವಣೆಯಲ್ಲಿಯೂ ಇದನ್ನು ‘ಶೀಷ್ ಮಹಲ್’ಎಂದು ಬಣ್ಣಿಸಿ, ಪ್ರಚಾರದ ವಿಷಯವಾಗಿ ಬಳಸಿತ್ತು.
ಮತಏಣಿಕೆಯ ಸಂದರ್ಭ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ಪಕ್ಷದ ಕಾರ್ಯಾಲಯದಲ್ಲಿ ಸಂಭ್ರಮದ ವಾತಾವರಣ ನೆಲೆಸಿತು. ಪಕ್ಷದ ಕಾರ್ಯಕರ್ತರು, ಮುಖಂಡರು ಪರಸ್ಪರ ಸಿಹಿಹಂಚಿಕೊಂಡು ಸಂಭ್ರಮಿಸಿದರು. ಇನ್ನೊಂದೆಡೆ ಆಪ್ ಹಾಗೂ ಕಾಂಗ್ರೆಸ್ ಪಕ್ಷದ ಮುಖ್ಯ ಕಾರ್ಯಾಲಯಗಳಲ್ಲಿ ನೀರವಮೌನ ನೆಲೆಸಿತ್ತು.
ಉಚಿತ ನೀರು ಮತ್ತು ವಿದ್ಯುತ್ ಒದಗಿಸುವ ಭರವಸೆಯನ್ನು ಈಡೇರಿಸುವ ಮೂಲಕ ದಿಲ್ಲಿಯ ಮಧ್ಯಮವರ್ಗ ಹಾಗೂ ಬಡಜನರನ್ನು ಆಕರ್ಷಿಸಿದ್ದ ಆಮ್ ಆದ್ಮಿ ಪಕ್ಷವು ಕಳೆದ ಎರಡು ಚುನಾವಣೆಗಳಲ್ಲಿ ಪ್ರಚಂಡ ಗೆಲುವು ಸಾಧಿಸಿತ್ತು.
ಆಪ್ನ ಉಚಿತ ಕೊಡುಗೆಗಳ ಆಶ್ವಾಸನೆಗೆ ಪ್ರತಿಯಾಗಿ ಈ ಸಲ ಬಿಜೆಪಿಯ ಕೂಡಾ ಎಲ್ಲಾ ಬಡಮಹಿಳೆಯರಿಗೆ 2500 ರೂ., ಪ್ರತಿಯೊಬ್ಬ ಗರ್ಭಿಣಿಗೆ 21 ಸಾವಿರ ರೂ., ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪೂರೈಕೆ, ವೃದ್ಧರಿಗೆ 2500 ರೂ. ಪಿಂಚಣಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಯುವಜನರಿಗೆ 15 ಸಾವಿರ ರೂ. ಇತ್ಯಾದಿ ಕೊಡುಗೆಗಳ ಮಹಾಪೂರವನ್ನೇ ಹರಿಸಿತ್ತು. ಬಿಜೆಪಿಯ ಗೆಲುವಿಗೆ ಈ ಉಚಿತ ಆಶ್ವಾಸನೆಗಳು ಗಣನೀಯ ಪಾತ್ರ ವಹಿಸಿವೆ ಎನ್ನಲಾಗಿದೆ.
ದಿಲ್ಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಮತದಾನವಾಗಿದ್ದು, ಇಂದು ಮತಏಣಿಕೆ ನಡೆದಿತ್ತು.







