ಹತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್ ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿ ಪ್ರತಿಭಟನೆಯಲ್ಲಿ ಪ್ರದರ್ಶನ!

Photo credit: PTI
ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿಸಿ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆ ವೇಳೆ ಆಂಧ್ರಪ್ರದೇಶದಲ್ಲಿ ಭದ್ರತಾಪಡೆಗಳಿಂದ ಹತ್ಯೆಯಾಗಿದ್ದ ಉನ್ನತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್ ಅನ್ನು ಪ್ರತಿಭಟನಾಕಾರರು ಪ್ರದರ್ಶಿಸಿರುವ ಬಗ್ಗೆ ವರದಿಯಾಗಿದೆ.
ದಿಲ್ಲಿ ವಾಯು ಮಾಲಿನ್ಯವನ್ನು ವಿರೋಧಿಸಿ ಇಂಡಿಯಾ ಗೇಟ್ ಬಳಿಯ ಸಿ-ಹೆಕ್ಸಾಗನ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯ ವೀಡಿಯೊ ವೈರಲ್ ಆಗಿದೆ. ಅದರಲ್ಲಿ ಒಬ್ಬ ಪ್ರತಿಭಟನಾಕಾರ ನವೆಂಬರ್ 18 ರಂದು ಆಂಧ್ರಪ್ರದೇಶ ಪೊಲೀಸರಿಂದ ಹತ್ಯೆಯಾದ ಮಾವೋವಾದಿ ಉನ್ನತ ಕಮಾಂಡರ್ ಮದ್ವಿ ಹಿದ್ಮಾ ಪೋಟೊ ಹೊಂದಿರುವ ಪೋಸ್ಟರ್ ಅನ್ನು ಹಿಡಿದಿರುವುದು ಕಂಡು ಬಂದಿದೆ.
ಪ್ರತಿಭಟನಾಕಾರರು, "ನೀವು ಎಷ್ಟು ಹಿದ್ಮಾರನ್ನು ಹತ್ಯೆ ಮಾಡುತ್ತೀರಿ? ಪ್ರತಿ ಮನೆಯಿಂದ ಹಿದ್ಮಾ ಹೊರ ಬರುತ್ತಾನೆ. ಹಿದ್ಮ ಚಿರಾಯುವಾಗಲಿ" ಎಂದು ಹತ್ಯೆಯಾದ ಮಾವೋವಾದಿ ಕಮಾಂಡರ್ ಪರ ಘೋಷಣೆಯನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೆ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದರಿಂದ ಉದ್ವಿಗ್ನತೆ ಸಂಭವಿಸಿದೆ. ಈ ಕುರಿತು ಎಫ್ಐಆರ್ ದಾಖಲಾಗಿದೆ. ಪ್ರತಿಭಟನೆಯಲ್ಲಿ ಉನ್ನತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್ ಪ್ರದರ್ಶನದ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.







