ದಿಲ್ಲಿ ವಾಯುಮಾಲಿನ್ಯ | ಡಿ.2ರವರೆಗೆ ಜಿಆರ್ಎಪಿ 4ನೇ ಹಂತದ ಕ್ರಮಗಳನ್ನು ಮುಂದುವರಿಸಲು ಸುಪ್ರೀಂಕೋರ್ಟ್ ಆದೇಶ

PC : PTI
ಹೊಸದಿಲ್ಲಿ : ಗಂಭೀರಾವಸ್ಥೆಗೆ ತಲುಪಿರುವ ವಾಯುಮಾಲಿನ್ಯವನ್ನು ನಿಭಾಯಿಸಲು ದಿಲ್ಲಿಯಲ್ಲಿ ಶ್ರೇಣಿಕೃತ ಪ್ರತಿಕ್ರಿಯಾ ಕಾರ್ಯಯೋಜನೆ (ಜಿಆರ್ಎಪಿ)ಯ ಹಂತ 4ರ ಅಡಿ ಜಾರಿಗೊಳಿಸಲಾಗಿರುವ ತುರ್ತು ಕ್ರಮಗಳನ್ನು ಡಿಸೆಂಬರ್ 2ರವರೆಗೆ ಮುಂದುವರಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶ ನೀಡಿದೆ.
ಜಿಆರ್ಎಪಿಯು ರಾಷ್ಟ್ರರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯವು ನಿರ್ದಿಷ್ಟ ಹಂತವನ್ನು ತಲುಪುವುದನ್ನು ತಡೆಯಲು ರೂಪಿಸಲಾದ ಮಾಲಿನ್ಯ ವಿರೋಧಿ ಕ್ರಮಗಳನ್ನು ಒಳಗೊಂಡಿದೆ. ರಾಷ್ಟ್ರರಾಜಧಾನಿ ಪ್ರದೇಶವನ್ನು ಪ್ರವೇಶಿಸುವುದಕ್ಕೆ ಟ್ರಕ್ಗಳಿಗೆ ನಿಷೇಧ ಹಾಗೂ ಸಾರ್ವಜನಿಕ ಯೋಜನೆಗಳ ಕಾಮಗಾರಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಆರ್ಎಪಿ ಶಿಫಾರಸು ಮಾಡಿದೆ.
ಆದರೆ ಸುಪ್ರೀಂಕೋರ್ಟ್ನ ಆದೇಶವು ಶಾಲೆಗಳಿಗೆ ಅನ್ವಯಿಸುವುದಿಲ್ಲ. ಆದುದರಿಂದ ದಿಲ್ಲಿಯಲ್ಲಿ ಶಾಲೆಗಳು ವಿದ್ಯಾರ್ಥಿಗಳು ಭೌತಿಕವಾಗಿ ಅಥವಾ ಆನ್ಲೈನ್ ಮೂಲಕ ತರಗತಿಗಳಿಗೆ ಹಾಜರಾಗುವುದಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ.
ಜಿಆರ್ಎಪಿ ಕ್ರಮಗಳು ಜಾರಿಗೊಂಡಿರುವ ರಾಷ್ಟ್ರರಾಜಧಾನಿ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿ ವಿಧಿಸಲಾಗಿರುವ ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆ ನಿರ್ಧರಿಸಲು ಸಭೆಯೊಂದನ್ನು ನಡೆಸುವಂತೆಯೂ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ ಅವರನ್ನೊಳಗೊಂಡ ನ್ಯಾಯಪೀಠವು ವಾಯುಗುಣಮಟ್ಟ ನಿರ್ವಹಣಾ ಆಯೋಗವು ನಿರ್ದೇಶನ ನೀಡಿದೆ.
ಬೆಳೆತ್ಯಾಜ್ಯ ಸುಡುವಿಕೆ, ಪಟಾಕಿ ಸಿಡಿತ, ವಾಹನ ಹೊಗೆ ಹೊರಸೂಸುವಿಕೆ,ತ್ಯಾಜ್ಯ ಸುಡುವಿಕೆ ಹಾಗೂ ಕೈಗಾರಿಕಾ ಮಾಲಿನ್ಯದಿಂದಾಗಿ ಹದಗೆಟ್ಟಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಜಿಆರ್ಎಪಿಯ ನಾಲ್ಕನೇ ಹಂತವನ್ನು ಜಾರಿಗೊಳಿಸುವಂತೆ ವಾಯುಗುಣಮಟ್ಟ ಸಮಿತಿಯು ನವೆಂಬರ್ 17ರಂದು ಆದೇಶಿಸಿತ್ತು.
ರಾಷ್ಟ್ರರಾಜಧಾನಿ ಪ್ರದೇಶದಲ್ಲಿ ವಾಯುಗುಣಮಟ್ಟವು ‘ಅತ್ಯಂತ ಗಂಭೀರ’ ಶ್ರೇಣಿಗೆ ತಲುಪಿರುವ ಹಿನ್ನೆಲೆಯಲ್ಲಿ ದಿಲ್ಲಿ, ಹರ್ಯಾಣ ಹಾಗೂ ಉತ್ತರಪ್ರದೇಶ ಸರಕಾರಗಳು ಕೂ ಎಲ್ಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಅಮಾನತಿನಲ್ಲಿರಿಸಿತ್ತು.







