ದಿಲ್ಲಿ ವಾಯುಗುಣಮಟ್ಟ ಕುಸಿತ : ಅನಗತ್ಯ ಕಾಮಗಾರಿ, ಮಾಲಿನ್ಯ ಕಾರಕ ವಾಹನಗಳ ಸಂಚಾರ ನಿಷೇಧ
Photo: PTI
ಹೊಸದಿಲ್ಲಿ : ದಿಲ್ಲಿ- ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾಯು ಗುಣಮಟ್ಟವು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯವಲ್ಲದ ಕಾಮಗಾರಿಗಳು ಹಾಗೂ ಚತುಷ್ಚಕ್ರ ವಾಹನಗಳ ಬಿಎಸ್-III ಪೆಟ್ರೋಲ್ ಹಾಗೂ ಬಿಎಸ್- I ಡೀಸೆಲ್ ಚಾಲಿತ ಚತುಷ್ಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಿ ಕೇಂದ್ರ ಸರಕಾರವು ರವಿವಾರ ಆದೇಶ ಹೊರಡಿಸಿದೆ.
ಅಹಿತಕರ ಹವಾಮಾನ ಪರಿಸ್ಥಿತಿ ಹಾಗೂ ಸ್ಥಳೀಯ ಮಾಲಿನ್ಯ ಮೂಲಗಳಿಂದಾಗಿ ದಿಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ದಲ್ಲಿ (ರವಿವಾರ ಬೆಳಗ್ಗೆ 10 ಗಂಟೆ ಹಾಗೂ 11 ಗಂಟೆಗೆ ಕ್ರಮವಾಗಿ 458 ಮತ್ತು 457) ಗಣನೀಯ ಏರಿಕೆಯಾಗಿರುವುದಾಗಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಬಂಧಗಳನ್ನು ವಿಧಿಸಲಾಗಿದೆಯೆಂದು ಅದು ಹೇಳಿದೆ.
ಆದಾಗ್ಯೂ ರಾಷ್ಟ್ರೀಯ ಭದ್ರತೆ , ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳು, ಆರೋಗ್ಯಪಾಲನೆ, ರೈಲ್ವೆ, ಮೆಟ್ರೋ ರೈಲು, ವಿಮಾನ ನಿಲ್ದಾಣಗಳು, ಅಂತರ್ ರಾಜ್ಯ ಬಸ್ ಟರ್ಮಿನಲ್ಗಳು, ಹೆದ್ದಾರಿಗಳು, ರಸ್ತೆಗಳು, ಫ್ಲೈಓವರ್ಗಳು, ಓವರ್ಬ್ರಿಜ್ಗಳು,ವಿದ್ಯುತ್ ಟ್ರಾನ್ಸ್ಮಿಶನ್, ಪೈಪ್ ಲೈನ್ಗಳು, ನೈರ್ಮಲೀಕರಣ ಹಾಗೂ ನೀರಿನ ಪೂರೈಕೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಈ ನಿರ್ಬಂಧಗಳಿಂದ ಹೊರತುಪಡಿಸಲಾಗಿದೆ.