ದಿಲ್ಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು| 118 ವಿಮಾನಗಳ ಹಾರಾಟ ರದ್ದು

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಡಿ.30: ದಿಲ್ಲಿಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ವಿಮಾನಗಳ ಹಾರಾಟಕ್ಕೆ ಮಂಗಳವಾರ ಕೂಡ ಅಡಚಣೆ ಉಂಟಾಯಿತು. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕನಿಷ್ಠ 118 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು. 130 ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿದವು.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನ 1,300 ವಿಮಾನಗಳ ಹಾರಾಟ ನಡೆಯುತ್ತದೆ. ಆದರೆ, ಮಂಗಳವಾರ 60 ಆಗಮನ ಹಾಗೂ 58 ವಿಮಾನಗಳ ನಿರ್ಗಮನಗಳನ್ನು ರದ್ದುಗೊಳಿಸಲಾಗಿದೆ. 16 ವಿಮಾನಗಳ ಸಂಚಾರ ಪಥ ಬೇರೆಡೆಗೆ ತಿರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಟ್ಟ ಮಂಜಿನ ಹಿನ್ನೆಲೆಯಲ್ಲಿ ಭಾರತದ ಹವಾಮಾನ ಇಲಾಖೆ (ಐಎಂಡಿ) ನಗರದಲ್ಲಿ ಬೆಳಗ್ಗೆ 9 ಗಂಟೆವರೆಗೆ ಯೆಲ್ಲೂ ಅಲರ್ಟ್ ಜಾರಿಗೊಳಿಸಿತ್ತು. ಸಫ್ದರ್ಜಂಗ್ನಲ್ಲಿ ಬೆಳಗ್ಗೆ 7.30ಕ್ಕೆ ದೃಗ್ಗೋಚರತೆ 100ರ ಮೀಟರ್ಗಳಷ್ಟಿತ್ತು. ನಂತರ ಬೆಳಗ್ಗೆ 8.30ರ ಹೊತ್ತಿಗೆ ದೃಗ್ಗೋಚರತೆ 200 ಮೀಟರ್ವರೆಗೆ ಸುಧಾರಿಸಿತು ಎಂದು ಹವಾಮಾನ ಇಲಾಖೆ ತಿಳಿಸಿದೆ.





