ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ : ಪೊಲೀಸರಿಂದ ಪರಿಶೀಲನೆ

PC : PTI
ಹೊಸದಿಲ್ಲಿ, ಸೆ. 28: ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐ) ರವಿವಾರ ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 6 ಗಂಟೆಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. ಈ ಬೆದರಿಕೆಯಿಂದ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಕೆಲವು ಶಾಲೆಗಳು ಹಾಗೂ ಇತರ ಕೆಲವು ಸಂಸ್ಥೆಗಳು ಕೂಡ ಇದೇ ರೀತಿ ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿವೆ ಎಂದು ಅವರು ಹೇಳಿದ್ದಾರೆ.
ದ್ವಾರಕಾದಲ್ಲಿರುವ ಸಿಆರ್ಪಿಎಫ್ ಪಬ್ಲಿಕ್ ಸ್ಕೂಲ್, ಕುತುಬ್ ಮಿನಾರ್ ಸಮೀಪದ ಸರ್ವೋದಯ ವಿದ್ಯಾಲಯ ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿರುವುದಾಗಿ ದಿಲ್ಲಿ ಅಗ್ನಿ ಶಾಮಕ ದಳದ ಅಧಿಕಾರಿಗಳು ದೃಢಪಡಿಸಿದ್ದಾರೆ. ಭದ್ರತಾ ತಂಡಗಳು ಕೂಲಂಕಷ ಪರಿಶೀಲನೆ ನಡೆಸಿದ ಬಳಿಕ ಅದು ಹುಸಿ ಬಾಂಬ್ ಎಂದು ತಿಳಿಯಿತು. ಇದರಿಂದ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಸಿಬ್ಬಂದಿ ನಿರಾಳರಾದರು ಅವರು ತಿಳಿಸಿದ್ದಾರೆ.
‘‘ಬಾಂಬ್ ಬೆದರಿಕೆ ಬಂದ ಶಾಲೆಗಳಲ್ಲಿ ಸೂಕ್ತ ಶೋಧ ಕಾರ್ಯಾಚರಣೆ ನಡೆಸಲು ಪೊಲೀಸ್ ತಂಡ, ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಬಾಂಬ್ ನಿಷ್ಕ್ರಿಯ ಘಟಕಗಳನ್ನು ನಿಯೋಜಿಸಲಾಯಿತು. ಆದರೆ, ಯಾವುದೇ ರೀತಿಯ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ’’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ದಿಲ್ಲಿಯ ದ್ವಾರಕಾ, ಶಾಲಿಮಾರ್ ಬಾಗ್ ಹಾಗೂ ಸಾಕೇತ್ನಲ್ಲಿರುವ ಮೂರು ಮ್ಯಾಕ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದ್ದವು.







