ದಿಲ್ಲಿ ವಿಧಾನಸಭಾ ಚುನಾವಣೆ | ಪಾಕಿಸ್ತಾನಿ ಹಿಂದೂ ನಿರಾಶ್ರಿತರಿಂದ ಮತದಾನ

ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ : ಇದೇ ಮೊದಲ ಬಾರಿಗೆ ಪಾಕಿಸ್ತಾನಿ ಹಿಂದೂ ನಿರಾಶ್ರಿತರು ದಿಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಮಾಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಇವರಿಗೆ ಕೇಂದ್ರ ಸರಕಾರವು ಪೌರತ್ವವನ್ನು ಮಂಜೂರು ಮಾಡಿದ್ದರಿಂದ ಅವರಿಗೆ ಮತದಾದ ಹಕ್ಕು ದೊರೆತಿದೆ.
ಸುಮಾರು 186 ಪಾಕಿಸ್ತಾನಿ ಹಿಂದೂ ನಿರಾಶ್ರಿತರು ದಿಲ್ಲಿ ವಿಧಾನಸಭಾ ಚುನಾವಣೆಗೆ ಮತಚಲಾಯಿಸಿರುವುದಾಗಿ ತಿಳಿದುಬಂದಿದೆ.
ಪಾಕಿಸ್ತಾನಿ ನಿರಾಶ್ರಿತರ ಪುನರ್ವಸತಿ ಕಾಲನಿಯಿರುವ ‘ಮಜ್ನೂ ಕಾ ತಿಲಾ’ ಪ್ರದೇಶದ ಮತಗಟ್ಟೆಯಲ್ಲಿ ಇವರೆಲ್ಲರೂ ಬೆಳಗ್ಗಿನ ವೇಳೆಯೇ ಉತ್ಸಾಹದಿಂದ ಮತದಾನಕ್ಕಾಗಿ ಸಾಲುಗಟ್ಟಿ ನಿಂತಿರುವುದು ಕಂಡುಬಂತು.
ಹಲವು ದಶಕಗಳಿಂದ ಸಾವಿರಾರು ಪಾಕಿಸ್ತಾನಿ ಹಿಂದೂ ವಲಸಿಗರು ಭಾರತದಲ್ಲಿ ಆಶ್ರಯ ಕೋರಿ ನೆಲೆಸಿದ್ದಾರೆ. ಅವರಲ್ಲಿ ಹೆಚ್ಚಿನವರು ದಿಲ್ಲಿಯ ಮಜ್ನೂ ಕಾ ತಿಲಾದಲ್ಲಿರುವ ತಾತ್ಕಾಲಿಕ ವಸತಿಗಳಲ್ಲಿ ನೆಲೆಸಿದ್ದಾರೆ.
ಕಳೆದ ವರ್ಷದ ಮಾರ್ಚ್ 11ರಂದು ಕೇಂದ್ರ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಜಾರಿಗೊಳಿಸಿದ್ದು, 2014ರ ಡಿಸೆಂಬರ್ 31ಕ್ಕೆ ಮುನ್ನ ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನ ದೇಶಗಳಿಂದ ಭಾರತಕ್ಕೆ ಆಗಮಿಸಿದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಪಡೆಯಲು ಅವಕಾಶ ಮಾಡಿಕೊಟ್ಟಿತ್ತು.