ದಿಲ್ಲಿ ಸ್ಫೋಟ ಪ್ರಕರಣ | ಸರ್ವ ಪಕ್ಷಗಳ ಸಭೆ ಕರೆಯುವಂತೆ ಕಾಂಗ್ರೆಸ್ ಆಗ್ರಹ

Photo Credit : PTI
ಹೊಸದಿಲ್ಲಿ, ನ. 13: ದಿಲ್ಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆದಷ್ಟು ಬೇಗ ಸರ್ವ ಪಕ್ಷಗಳ ಸಭೆ ಕರೆಯುವಂತೆ ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ.
ದಿಲ್ಲಿ ಸ್ಫೋಟದ ಕುರಿತಂತೆ ಆಡಳಿತಾರೂಢ ಸರಕಾರಕ್ಕೆ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಕೇಳಿತು. ಅಲ್ಲದೆ, ಭೀಕರ ದಾಳಿಯ ಹಿನ್ನೆಲೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶವನ್ನು ಮುಂಚಿತವಾಗಿ ನಡೆಸುವಂತೆ ಕೂಡ ಅದು ಒತ್ತಾಯಿಸಿತು. ಇದರಿಂದ ದಿಲ್ಲಿ ಸ್ಫೋಟದ ಕುರಿತು ಚರ್ಚಿಸಲು ಸಾಧ್ಯವಾಗಬಹುದು ಎಂದು ಅದು ಹೇಳಿತು.
ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ನ ಹಿರಿಯ ನಾಯಕ ಪವನ್ ಖೇರಾ, ‘‘ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈಗ ಪ್ರಧಾನಿ ಭೂತಾನ್ನಿಂದ ಹಿಂದಿರುಗಿದ್ದಾರೆ. ಯಾವುದೇ ರೀತಿಯ ವಿಳಂಬ ಮಾಡದೆ ಸರ್ವ ಪಕ್ಷಗಳ ಸಭೆ ನಡೆಸಬೇಕು. ಇದು ದೇಶದ ಭದ್ರತೆಗೆ ಸಂಬಂಧಿಸಿರುವುದರಿಂದ ಮುಖ್ಯವಾಗಿದೆ’’ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 1ರಂದು ಆರಂಭವಾಗಲಿರುವ ಮುಂಬರುವ ಚಳಿಗಾಲದ ಅಧಿವೇಶನವನ್ನು ಉಲ್ಲೇಖಿಸಿದ ಅವರು, ದಿಲ್ಲಿ ಸ್ಫೋಟ ಘಟನೆ ದೇಶದ ಭದ್ರತೆಗೆ ಗಂಭೀರ ಸವಾಲಾಗಿದೆ. ಆದ್ದರಿಂದ ಸಂಸತ್ತಿನ ಮುಂಬರುವ ಅಧಿವೇಶನವನ್ನು ಮುಂಚಿತವಾಗಿ ನಡೆಸುವಂತೆ ನಾವು ಆಗ್ರಹಿಸುತ್ತೇವೆ. ಇದನ್ನು ಸರಕಾರ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದು ನಮಗೆ ತಿಳಿದಿಲ್ಲ. ಪ್ರಧಾನಿ ಅವರು ಗಂಭೀರವಾಗಿ ಪರಿಗಣಿಸಿದ್ದರೆ, ಭೂತಾನ್ಗೆ ಭೇಟಿ ನೀಡುತ್ತಿರಲಿಲ್ಲ ಎಂದರು.
ಈ ವಿಷಯದಲ್ಲಿ ಸರಕಾರ ದೃಢ ನಿಲುವು ತೆಗೆದುಕೊಳ್ಳಬೇಕು. ನಾವು ಸರಕಾರದ ಬೆಂಬಲಕ್ಕೆ ಇದ್ದೇವೆ ಎಂದು ಅವರು ಹೇಳಿದರು.
ದಿಲ್ಲಿ ಕಾರು ಸ್ಫೋಟದ ಸುತ್ತ ಹಲವು ಪ್ರಶ್ನೆಗಳಿವೆ. ಈ ಸ್ಫೋಟ ಹೇಗೆ ಸಂಭವಿಸಿತು? ಯಾವ ಮಟ್ಟದಲ್ಲಿ ವೈಫಲ್ಯ ಸಂಭವಿಸಿದೆ ? ಈ ವೈಫಲ್ಯದ ಜವಾಬ್ದಾರಿಯನ್ನು ಯಾರು ಹೊತ್ತುಕೊಳ್ಳುತ್ತಾರೆ ? ಎಂದು ಖೇರಾ ಪ್ರಶ್ನಿಸಿದರು.







