ದಿಲ್ಲಿ ಸ್ಫೋಟ | ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ ಎಂದು ಭಾವಿಸಿ ನಿಶ್ಚಿತಾರ್ಥ ಕಾರ್ಯಕ್ರಮ ಮುಂದುವರಿಸಿದ ಜೋಡಿ!

Photo Credit : PTI
ಹೊಸದಿಲ್ಲಿ: ಯಾವುದಾದರೂ ಜನನಿಬಿಡ ಪ್ರದೇಶದಲ್ಲಿ ಭಾರಿ ಸ್ಫೋಟದ ಸದ್ದು ಕೇಳಿ ಬಂದರೆ, ಜನರ ಪ್ರತಿಕ್ರಿಯೆ ಹೇಗಿರುತ್ತದೆ? ಅಕ್ಷರಶಃ ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗುತ್ತಾರೆ. ಆದರೆ, ಇಲ್ಲೊಂದು ಜೋಡಿ, ಅಬ್ಬರದ ಡಿಜೆ ಸಂಗೀತದ ನಡುವೆ ಪರಸ್ಪರ ಉಂಗುರಗಳನ್ನು ಬದಲಿಸಿಕೊಂಡಿದೆ. ಈ ಘಟನೆ ಸೋಮವಾರ ರಾತ್ರಿ ಕಾರು ಸ್ಫೋಟ ಸಂಭವಿಸಿದ ಕೆಂಪು ಕೋಟೆಯಿಂದ ಸುಮಾರು 100 ಮೀಟರ್ ದೂರವಿರುವ ಚಾಂದಿನಿ ಚೌಕದಲ್ಲಿನ ಜೈನ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದಿದೆ.
ಸೋಮವಾರ ರಾತ್ರಿ ಭಾರಿ ಸ್ಫೋಟದ ಸದ್ದು ಕೇಳಿ ಬಂದರೂ, ಜೋಡಿಗಳ ಪೋಷಕರು ಅದೊಂದು ಟ್ರಾನ್ಸ್ ಫಾರ್ಮರ್ ಅಥವಾ ಸಿಲಿಂಡರ್ ಸ್ಫೋಟ ಎಂದು ತಪ್ಪಾಗಿ ಭಾವಿಸಿ, ತಮ್ಮ ಮಕ್ಕಳ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಸಡಗರದಿಂದ ಮುಂದುವರಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.
1932ರಲ್ಲಿ ಸ್ಥಾಪಿಸಲಾಗಿರುವ ಈ ಕ್ರೀಡಾ ಕ್ಲಬ್ ನ ಭದ್ರತಾ ಸಿಬ್ಬಂದಿಯೊಬ್ಬರು, “ಸ್ಫೋಟ ಸಂಭವಿಸಿದಾಗ ಸ್ಥಳದಲ್ಲಿ ಅಸ್ತವ್ಯಸ್ತ ಸ್ಥಿತಿ ಮನೆ ಮಾಡಿತ್ತು. ಅದೊಂದು ಸಿಲಿಂಡರ್ ಸ್ಫೋಟವಿರಬಹುದು ಎಂದು ಬಹುತೇಕ ನಾವೆಲ್ಲ ತಪ್ಪಾಗಿ ಭಾವಿಸಿದೆವು. ಇಂತಹ ಸಾಮಾನ್ಯ ದಿನದಲ್ಲಿ ಇಂತಹ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಬಹುದು ಎಂದು ಯಾರು ತಾನೆ ಊಹಿಸಲು ಸಾಧ್ಯ?” ಎಂದು ಹೇಳಿದ್ದಾರೆ.
ಸೋಮವಾರ ಸಂಜೆ 6 ಗಂಟೆಯವರೆಗೂ ನಾನು ಕರ್ತವ್ಯನಿರತನಾಗಿದ್ದೆ ಹಾಗೂ ಕ್ಲಬ್ ನೊಳಗೆ ನಿಶ್ಚಿತಾರ್ಥ ಕಾರ್ಯಕ್ರಮ ಮುಂದುವರೆದಿತ್ತು ಎಂದು ಅವರು ಸ್ಮರಿಸಿದ್ದಾರೆ.
“ಅದು ಮತ್ತೊಂದು ದಿನವಾಗಿತ್ತು, ಮತ್ತೊಂದು ಕಾರ್ಯಕ್ರಮವಾಗಿತ್ತು. ಎಲ್ಲರೂ ಅದೊಂದು ಟ್ರಾನ್ಸ್ ಫಾರ್ಮರ್ ಅಥವಾ ಬೇರೇನೋ ಸ್ಫೋಟವಿರಬಹುದು ಎಂದು ಭಾವಿಸಿದ್ದರು. ಅದನ್ನು ಪರಿಶೀಲಿಸಲೂ ಯಾರೂ ಹೊರಗೆ ಬರಲಿಲ್ಲ” ಎಂದೂ ಅವರು ಹೇಳಿದ್ದಾರೆ.
ದಿಲ್ಲಿಯ ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಹಲವು ವಾಹನಗಳು ಅಗ್ನಿಗಾಹುತಿಯಾಗಿ, ಹತ್ತಾರು ಮಂದಿ ಗಾಯಗೊಂಡಿದ್ದರು. ಬಳಿಕ ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರು ಮೃತಪಟ್ಟಿದ್ದರಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.







