ದಿಲ್ಲಿ ಕಾರ್ ಸ್ಫೋಟ ತನಿಖೆ ಚುರುಕು | ಪುಲ್ವಾಮದ ವೈದ್ಯನಿಂದ ಆತ್ಮಹತ್ಯಾ ದಾಳಿ ಶಂಕೆ

Photo: PTI
ಹೊಸದಿಲ್ಲಿ,ನ.11: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ನಡೆದ ಕಾರ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ. ಐತಿಹಾಸಿಕ ಕೆಂಪುಕೋಟೆ ಪ್ರದೇಶದ ಮೆಟ್ರೋ ನಿಲ್ದಾಣದ ಸಮೀಪ ನಡೆದ ಈ ಭೀಕರ ಸ್ಪೋಟವು ಭಯೋತ್ಪಾದಕ ಕೃತ್ಯವೆಂದು ತನಿಖಾ ಏಜೆನ್ಸಿಗಳು ತಿಳಿಸಿದ್ದು, ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರಿಸಿದೆ.
ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಪುಲ್ವಾಮಾದ ವೈದ್ಯ ಡಾ. ಉಮರ್ ನಬಿ ಎಂದು ತನಿಖಾ ಏಜೆನ್ಸಿಗಳು ಗುರುತಿಸಿವೆ. ಈತ ಕಾರನ್ನು ಸ್ಫೋಟಿಸಿ ಆತ್ಮಹತ್ಯಾದಾಳಿ ನಡೆಸಿದ್ದಾನೆಂದು ಅವು ಶಂಕಿಸಿವೆ.
ಘಟನೆಗೆ ಸಂಬಂಧಿಸಿ ಪೊಲೀಸರು ಕನಿಷ್ಠ ನಾಲ್ಕು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಭಯೋತ್ಪಾದಕ ದಾಳಿಯ ಸಂಚುಕೋರರನ್ನು ಸದೆಬಡಿಯದೆ ಬಿಡುವುದಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ.
ದಿಲ್ಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಸಮೀಪ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜಮ್ಮುಕಾಶ್ಮೀರ ಪೊಲೀಸರು ಮಂಗಳವಾರ ಕಣಿವೆ ಪ್ರದೇಶದ ವಿವಿಧೆಡೆ ದಾಳಿಗಳನ್ನು ನಡೆಸಿದ್ದು, ಆರು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಫೋಟಗೊಂಡ ಕಾರಿನ ಚಾಲಕನೆನ್ನಲಾದ ಪುಲ್ವಾಮಾದ ವೈದ್ಯ ಡಾ. ಉಮರ್ ನಬಿಯ ಪುಲ್ವಾಮಾದಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ ಜಮ್ಮುಕಾಶ್ಮೀರ ಪೊಲೀಸರು , ಡಾ. ಉಮರ್ ನಬಿಯ ತಾಯಿ ಹಾಗೂ ಆತನ ಇಬ್ಬರು ಸಹೋದರರು ಬಂಧಿತರಲ್ಲಿ ಒಳಗೊಂಡಿದ್ದಾರೆ. ಮೊಬೈಲ್ ಫೋನ್ ಗಳು ಹಾಗೂ ಲ್ಯಾಪ್ ಟಾಪ್ ಗಳು ಸೇರಿದಂತೆ ಮನೆಯಲ್ಲಿದ್ದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಿಲ್ಲಿಯ ಕಾರ್ ಸ್ಫೋಟದಲ್ಲಿ ಛಿದ್ರಗೊಂಡ ದೇಹವೊಂದು ಉಮರ್ ನಬಿಯದ್ದೆಂದು ಶಂಕಿಸಲಾಗಿದ್ದು, ಡಿಎನ್ಎ ಮಾದರಿಗಳನ್ನು ಸಂಗ್ರಹಿಸುವುದಕ್ಕಾಗಿ ಆತನ ತಾಯಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಹೊಸದಿಲ್ಲಿಯ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಸಮೀಪ ಸೋಮವಾರ ಸಂಜೆ 6.52ರ ವೇಳೆಗೆ ಹುಂಡೈ ಐ20 ಕಾರ್ ಸ್ಫೋಟಗೊಂಡಿದ್ದು, 13 ಮಂದಿ ಮೃತಪಟ್ಟರು ಹಾಗೂ ಹಲವಾರು ಮಂದಿ ಗಾಯಗೊಂಡಿದ್ದರು. ಜನದಟ್ಟಣೆಯ ಪ್ರದೇಶಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಯಿಂದಾಗಿ ಹಲವಾರು ವಾಹನಗಳು ಹೊತ್ತಿ ಉರಿದಿದ್ದು, ಮೃತದೇಹಗಳು ಛಿದ್ರಗೊಂಡು ಪ್ರದೇಶದೆಲ್ಲೆಡೆ ಚದುರಿ ಬಿದ್ದಿದ್ದವು.







