ರಾಷ್ಟ್ರೀಯ ಭದ್ರತೆಯ ಕುರಿತು ಸರಕಾರವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ: ದಿಲ್ಲಿ ಸಿಎಂ

ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ | PTI
ಹೊಸದಿಲ್ಲಿ: ಆಮ್ ಆದ್ಮಿ ಪಾರ್ಟಿ(ಆಪ್)ಯನ್ನು ಬುಧವಾರ ತರಾಟೆಗೆತ್ತಿಕೊಂಡ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ರಾಷ್ಟ್ರೀಯ ಭದ್ರತೆಯ ಕುರಿತು ಸರಕಾರವನ್ನು ಅಥವಾ ಸಶಸ್ತ್ರ ಪಡೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು. ತಂದೆಯೋರ್ವ ತನ್ನ ದೇಶ,ತನ್ನ ಕುಟುಂಬ ಮತ್ತು 140 ಕೋಟಿ ಭಾರತೀಯರ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಪ್ತಾ, ತುರ್ತು ಪರಿಸ್ಥಿತಿ ಎದುರಾದಾಗ ದೇಶದ ಹಿತಾಸಕ್ತಿಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಇಡೀ ದೇಶವೇ ಸಶಸ್ತ್ರ ಪಡೆಗಳೊಂದಿಗೆ ನಿಂತಿದೆ ಎಂದು ಹೇಳಿದರು.
ಪಾಕಿಸ್ತಾನದ ಜೊತೆ ಭಾರತದ ಕದನ ವಿರಾಮ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸುತ್ತಿರುವ ಆಪ್, ಈ ಬೆಳವಣಿಗೆಗೆ ಕಾರಣವೇನು ಎಂದು ಅಚ್ಚರಿ ವ್ಯಕ್ತಪಡಿಸಿತ್ತಲ್ಲದೆ, ಪಹಲ್ಗಾಮ್ ದಾಳಿಯಲ್ಲಿ ಮೃತರ ಕುಟುಂಬಗಳಿಗೆ ನಿಜವಾಗಿಯೂ ನ್ಯಾಯ ದೊರಕಿದೆಯೇ ಎಂದು ಪ್ರಶ್ನಿಸಿತ್ತು.
ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡು ಟವಿಯನ್ನು ನೋಡುತ್ತ ಯಾರೂ ಏನು ಬೇಕಾದರೂ ಹೇಳಬಹುದು. ತಂದೆಯೋರ್ವ ತನ್ನ ದೇಶ, ಕುಟುಂಬ ಮತ್ತು 140 ಕೋಟಿ ಭಾರತೀಯರ ಬಗ್ಗೆ ಯೋಚಿಸಬೇಕಾಗುತ್ತದೆ. ಕೇವಲ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರಕಾರವನ್ನು ಅಥವಾ ಸಶಸ್ತ್ರ ಪಡೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಗುಪ್ತಾ ಪ್ರತಿಪಾದಿಸಿದರು.







