ಹಲ್ಲೆ ಪ್ರಕರಣದ ಬೆನ್ನಲ್ಲೇ ದಿಲ್ಲಿ ಸಿಎಂ ರೇಖಾ ಗುಪ್ತಾಗೆ ‘Z’ ಶ್ರೇಣಿಯ ವಿಐಪಿ ಭದ್ರತೆ ನೀಡಿದ ಕೇಂದ್ರ ಸರಕಾರ

ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ (Photo: PTI)
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆಯ ಬೆನ್ನಿಗೇ, ಕೇಂದ್ರ ಸರಕಾರ ಅವರಿಗೆ ‘ಝೆಡ್’ ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಿದೆ ಎಂದು ಗುರುವಾರ ಅಧಿಕೃತ ಮೂಲಗಳು ತಿಳಿಸಿವೆ.
ಗುಪ್ತಾ ಅವರ ಅಧಿಕೃತ ನಿವಾಸದಲ್ಲಿ ಅರೆಸೈನಿಕ ಪಡೆಯ ವಿಐಪಿ ಸೆಕ್ಯೂರಿಟಿ ಗ್ರೂಪ್ ನ (ವಿಎಸ್ಜಿ) ಭದ್ರತೆ ಒದಗಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ದಿಲ್ಲಿ ಮುಖ್ಯಮಂತ್ರಿಯ ಭದ್ರತೆಯ ಹೊಣೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ವಹಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.
ದಿನದ 24 ಗಂಟೆಯೂ 22ರಿಂದ 25 ಸಶಸ್ತ್ರ ಕಮಾಂಡೊಗಳ ತಂಡವು ಮುಖ್ಯಮಂತ್ರಿಯ ಭದ್ರತೆಯಲ್ಲಿ ನಿರತವಾಗಿರಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬಕ್ಕೂ ಇದೇ ಪಡೆಯು ಭದ್ರತೆಯನ್ನು ಒದಗಿಸುತ್ತಿದೆ.
Next Story





