ಜಾಗರೂಕತೆಯಿಂದ ಚಲಾಯಿಸಿ ಎಂದು ಕಿವಿಮಾತು ಹೇಳಿದ ಪೊಲೀಸ್ ಪೇದೆಗೆ ಥಳಿಸಿದ ಮಹಿಳೆ, ಆಕೆಯ ಪುತ್ರರು
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮೂವರು ವ್ಯಕ್ತಿಗಳು ಪ್ರಯಾಣಿಸುತ್ತಿದ್ದ ಕಾರೊಂದು ದಿಲ್ಲಿಯ ಹೆಡ್ ಕಾನ್ ಸ್ಟೇಬಲ್ ಒಬ್ಬರ ವಾಹನದ ಮುಂಭಾಗಕ್ಕೆ ಢಿಕ್ಕಿ ಹೊಡೆದಿದ್ದು, ಆಗ “ವಾಹನವನ್ನು ಜಾಗರೂಕತೆಯಿಂದ ಚಲಾಯಿಸಿ” ಎಂದು ಕಿವಿಮಾತು ಹೇಳಿದ ಅವರಿಗೆ ಕಾರು ಪ್ರಯಾಣಿಕರು ಅಮಾನುಷವಾಗಿ ಥಳಿಸಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ ಎಂದು ndtv.com ವರದಿ ಮಾಡಿದೆ.
ಈ ಘಟನೆಯು ಸೆಪ್ಟೆಂಬರ್ 15ರಂದು ದಿಲ್ಲಿಯ ತಿಲಕ್ ನಗರದಿಂದ ವರದಿಯಾಗಿದೆ.
ಈ ಸಂಬಂಧ ದೂರು ದಾಖಲಿಸಿರುವ ದಿಲ್ಲಿ ಹೆಡ್ ಕಾನ್ ಸ್ಟೇಬಲ್ ಎಂ.ಜಿ.ರಾಜೇಶ್, ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಪ್ರಯಾಣಿಸುತ್ತಿದ್ದ ಕಾರು ನನ್ನ ಕಾರಿಗೆ ಢಿಕ್ಕಿ ಹೊಡೆಯಿತು. ಆಗ ನನ್ನ ಕಾರಿಗಾದ ಹಾನಿಯನ್ನು ಅವರಿಗೆ ತೋರಿಸಿ, ಅಜಾಗರೂಕತೆಯಿಂದ ವಾಹನ ಚಲಾಯಿಸಬೇಡಿ ಎಂದು ಅವರಿಗೆ ಕಿವಿಮಾತು ಹೇಳಿ ಮನೆಗೆ ತೆರಳಿದೆ ಎಂದು ತಿಳಿಸಿದ್ದಾರೆ.
ಮೂವರು ಪ್ರಯಾಣಿಕರೊಂದಿಗೆ ಕೊಂಚ ವಾಗ್ವಾದ ನಡೆಸಿದ ನಂತರ ನಾನು ಮನೆಯತ್ತ ಹೊರಟೆ. ಆದರೆ, ನನ್ನನ್ನು ಹಿಂಬಾಲಿಸಿದ ಅವರೆಲ್ಲ, ನನ್ನನ್ನು ದಾರಿ ಮಧ್ಯೆ ತಡೆದರು. ನಂತರ ಅವರೆಲ್ಲ ನನ್ನನ್ನು ಕಾರಿನಿಂದ ಹೊರಗೆಳೆದು, ಇಟ್ಟಿಗೆ ಹಾಗೂ ಕಬ್ಬಿಣದ ಸಲಾಕೆಯಿಂದ ಥಳಿಸಿದರು ಹಾಗೂ ಕಾರನ್ನು ಜಖಂಗೊಳಿಸಿದರು ಎಂದು 50 ವರ್ಷ ವಯಸ್ಸಿನ ಅವರು ದೂರಿನಲ್ಲಿ ಹೇಳಿದ್ದಾರೆ.
ಆ ಅಮಾನುಷ ದಾಳಿಯಿಂದ ನಾನು ಪ್ರಜ್ಞಾಹೀನನಾದೆ ಎಂದೂ ರಾಜೇಶ್ ತಿಳಿಸಿದ್ದಾರೆ. “ನಮ್ಮ ತಂದೆಗೆ ಮಹಾರಾಜ ಅಗ್ರಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಅವರ ಪುತ್ರ ಹೇಳಿದ್ದಾರೆ.
ರಾಜೇಶ್ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಇಬ್ಬರು ಸಹೋದರರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಅವರ ತಾಯಿ ಎಂದು ನಂಬಲಾಗಿರುವ ಮಹಿಳೆಯ ಪಾತ್ರದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.