ಸಂಜಯ್ ಭಂಡಾರಿ ದೇಶಭ್ರಷ್ಟ ಆರ್ಥಿಕ ಅಪರಾಧಿ: ದಿಲ್ಲಿ ಕೋರ್ಟ್ ಘೋಷಣೆ
ಗಡಿಪಾರು ಮಾರ್ಗ ಸುಗಮ; ರಾಬರ್ಟ್ ವಾದ್ರಾ ಪ್ರಕರಣಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರ ವ್ಯಾಪಾರಿ

Photo Credit: thehindu
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ(ಈಡಿ)ವು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ದಿಲ್ಲಿಯ ವಿಶೇಷ ನ್ಯಾಯಾಲಯವು ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಶನಿವಾರ ಘೋಷಿಸಿದೆ.
ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ 2018ರಡಿ ವಿಶೇಷ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.
ಭಂಡಾರಿ ಪ್ರಸ್ತುತ ಬ್ರಿಟನ್ನಲ್ಲಿ ನೆಲೆಸಿದ್ದು,ನ್ಯಾಯಾಲಯದ ಆದೇಶವು ಅವರನ್ನು ಗಡಿಪಾರುಗೊಳಿಸುವ ಭಾರತದ ಪ್ರಯತ್ನಕ್ಕೆ ಹೆಚ್ಚಿನ ಬಲ ನೀಡಲಿದೆ. 2016ರಲ್ಲಿ ಹಲವಾರು ತನಿಖಾ ಸಂಸ್ಥೆಗಳು ತನ್ನ ಚಟುವಟಿಕೆಗಳ ಪರಿಶೀಲನೆಯನ್ನು ಆರಂಭಿಸಿದ ಬಳಿಕ ಭಂಡಾರಿ ಲಂಡನ್ಗೆ ಪರಾರಿಯಾಗಿದ್ದರು.
ಈ ಬೆಳವಣಿಗೆಯು ಭಂಡಾರಿ ಜೊತೆ ಸಂಪರ್ಕಗಳನ್ನು ಹೊಂದಿರುವ ಆರೋಪದಲ್ಲಿ ತನಿಖೆಯನ್ನು ಎದುರಿಸುತ್ತಿರುವ ರಾಬರ್ಟ್ ವಾದ್ರಾ ಅವರನ್ನು ಸಂಕಷ್ಟದಲ್ಲಿ ಸಿಲುಕಿಸುವ ಸಾಧ್ಯತೆಯಿದೆ.
ಇತ್ತೀಚಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ್ರಾಗೆ ಹೊಸದಾಗಿ ಸಮನ್ಸ್ ಹೊರಡಿಸಲಾಗಿದ್ದು, ಭಂಡಾರಿ ಜೊತೆ ಅವರ ಸಂಬಂಧವನ್ನೂ ಈ ಪ್ರಕರಣದಲ್ಲಿ ಆರೋಪಿಸಲಾಗಿದೆ. ಪ್ರಕರಣವು ವಾದ್ರಾ ಒದಗಿಸಿದ್ದ ಹಣದಿಂದ ಭಂಡಾರಿ 2009ರಲ್ಲಿ ಲಂಡನ್ ನಲ್ಲಿ ಆಸ್ತಿಯೊಂದನ್ನು ಖರೀದಿಸಿ ಅದನ್ನು ನವೀಕರಿಸಿದ್ದರು ಎಂದು ಆರೋಪಿಸಿ ಈಡಿ 2023ರಲ್ಲಿ ದಾಖಲಿಸಿರುವ ದೋಷಾರೋಪ ಪಟ್ಟಿಯನ್ನು ಕೇಂದ್ರೀಕರಿಸಿದೆ. ತನ್ನ ಪಾತ್ರವನ್ನು ನಿರಾಕರಿಸಿರುವ ವಾದ್ರಾ, ತನ್ನ ವಿರುದ್ಧದ ಆರೋಪಗಳನ್ನು ‘ರಾಜಕೀಯ ಪ್ರತೀಕಾರ ಕ್ರಮ’ವೆಂದು ಬಣ್ಣಿಸಿದ್ದಾರಲ್ಲದೆ, ರಾಜಕೀಯ ಉದ್ದೇಶದಿಂದಾಗಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.