ನೀಲಮ್ ಆಝಾದ್ ಗೆ ಜಾಮೀನು ನಿರಾಕರಿಸಿದ ದಿಲ್ಲಿ ನ್ಯಾಯಾಲಯ

ನೀಲಮ್ ಆಝಾದ್ | Photo : PTI
ಹೊಸದಿಲ್ಲಿ: ದಿಲ್ಲಿ ನ್ಯಾಯಾಲಯವೊಂದು ಗುರುವಾರ ಸಂಸತ್ ಭದ್ರತಾ ವ್ಯವಸ್ಥೆ ಉಲ್ಲಂಘನೆ ಪ್ರಕರಣದ ಆರೋಪಿ ನೀಲಮ್ ಆಝಾದ್ ಗೆ ಜಾಮೀನು ನಿರಾಕರಿಸಿದೆ.
ಈ ಪ್ರಕರಣದಲ್ಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ಇತರ ಆರೋಪಿಗಳೆಂದರೆ- ಮನೋರಂಜನ್ ಡಿ, ಸಾಗರ್ ಶರ್ಮ, ಅಮೋಲ್ ಧನರಾಜ್ ಶಿಂದೆ, ಲಲಿತ್ ಝಾ ಮತ್ತು ಮಹೇಶ್ ಕುಮಾವತ್.
ಡಿಸೆಂಬರ್ 13ರಂದು, ಶರ್ಮ ಮತ್ತು ಮನೋರಂಜನ್ ಡಿ ಲೋಕಸಭೆಯಲ್ಲಿ ಸಂದರ್ಶಕರ ಗ್ಯಾಲರಿಯಿಂದ ಚೇಂಬರ್ಗೆ ಜಿಗಿದು ಬಾಟಲಿಯೊಂದರಿಂದ ಬಣ್ಣದ ಅನಿಲವನ್ನು ಸಿಡಿಸಿದ್ದರು. ಸಂಸತ್ತಿನ ಹೊರಗೆ, ಆಝಾದ್ ಮತ್ತು ಶಿಂದೆ ಕೂಡ ಬಾಟಲಿಯಿಂದ ಅನಿಲವನ್ನು ಹೊರಸೂಸಿ ‘‘ಸರ್ವಾಧಿಕಾರವನ್ನು ನಿಲ್ಲಿಸಿ’’ ಎಂಬ ಘೋಷಣೆಗಳನ್ನು ಕೂಗಿದ್ದರು.
ನೀಲಮ್ ಆಝಾದ್ ಜಾಮೀನು ಅರ್ಜಿಯನ್ನು ದಿಲ್ಲಿ ಪೊಲೀಸರು ವಿರೋಧಿಸಿದರು. ಕೃತ್ಯದಲ್ಲಿ ಅವರು ಶಾಮೀಲಾಗಿರುವುದನ್ನು ತೋರಿಸುವ ಸಾಕಷ್ಟು ಪುರಾವೆಯಿದೆ ಎಂದು ಅವರು ವಾದಿಸಿದರು. ಅವರನ್ನು ಬಿಡುಗಡೆ ಮಾಡಿದರೆ ತನಿಖೆಗೆ ಮಾರಕವಾಗಲಿದೆ ಎಂದು ಪೊಲೀಸರು ಹೇಳಿದರು.





