ಉದ್ಯೋಗಕ್ಕಾಗಿ ಭೂಮಿ ಹಗರಣ| ಲಾಲುಪ್ರಸಾದ್ ಕುಟುಂಬದ ವಿರುದ್ಧ ಭ್ರಷ್ಟಾಚಾರ, ವಂಚನೆ ಆರೋಪ ದಾಖಲಿಸಿದ ದಿಲ್ಲಿ ಕೋರ್ಟ್

File Photo: PTI
ಹೊಸದಿಲ್ಲಿ,ಜ.9: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯವು ಆರ್ಜೆಡಿ ವರಿಷ್ಠ ಹಾಗೂ ಮಾಜಿ ರೈಲ್ವೆ ಸಚಿವ ಲಾಲುಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಮಕ್ಕಳಾದ ತೇಜಸ್ವಿ ಯಾದವ್, ತೇಜ ಪ್ರತಾಪ್ ಯಾದವ್ ಹಾಗೂ ಮಿಸಾ ಭಾರತಿ ವಿರುದ್ಧ ಶುಕ್ರವಾರ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಈ ಪ್ರಕರಣದಲ್ಲಿ ಆರೋಪಿಗಳು ಭ್ರಷ್ಟಾಚಾರ, ವಂಚನೆ ಹಾಗೂ ಕ್ರಿಮಿನಲ್ ಸಂಚಿನಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆಯೆಂದು ನ್ಯಾಯಾಲಯ ಪ್ರತಿಪಾದಿಸಿದೆ.
ಲಾಲು ಪ್ರಸಾದ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳಡಿ ದೋಷಾರೋಪವನ್ನು ಹೊರಿಸಲಾಗಿದ್ದರೆ, ಅವರ ಕುಟುಂಬ ಸದಸ್ಯರು ಭಾರತೀಯ ದಂಡ ಸಂಹಿತೆಯಡಿ ವಂಚನೆ ಹಾಗೂ ಸಂಚಿನ ಆರೋಪಗಳನ್ನು ಎದುರಿಸಲಿದ್ದಾರೆ.
ಲಾಲು ಪ್ರಸಾದ್ ಅವರು 2004 ಹಾಗೂ 2009ರ ನಡುವೆ ರೈಲ್ವೆ ಸಚಿವರಾಗಿದ್ದಾಗ, ಅವರ ಕುಟುಂಬ ಸದಸ್ಯರಿಗೆ ಅಥವಾ ಅವರು ನಂಟು ಹೊಂದಿರುವ ಸಂಸ್ಥೆಗಳಿಗೆ ಅತ್ಯಂತ ನಗಣ್ಯ ದರದಲ್ಲಿ ಜಮೀನುಗಳನ್ನು ಮಾರಾಟ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿನ ಗ್ರೂಪ್ ಡಿ ಹುದ್ದೆಗಳನ್ನು ನೇಮಕಾತಿ ಮಾಡಲಾಗಿತ್ತೆಂಬ ಆರೋಪಿಸಲಾಗಿದೆ.
ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಅನುಸರಿಸಲಾಗಿಲ್ಲ ಹಾಗೂ ಉದ್ಯೋಗಕ್ಕಾಗಿ ಜಮೀನುಗಳನ್ನು ವರ್ಗಾಯಿಸಲಾಗಿತ್ತೆಂದು ತನಿಖಾಧಿಕಾರಿಗಳು ಆರೋಪಿಸಿದ್ದರು.
ಪ್ರಕರಣದ ವಿಚಾರಣೆಯನ್ನು ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ನ್ಯಾಯಾಲಯ ತಳ್ಳಿಹಾಕಿದ್ದು, ಈ ಹಂತದಲ್ಲಿ ಇದು ಅನಪೇಕ್ಷಣೀಯವೆಂದು ತಿಳಿಸಿತ್ತು. ಪ್ರಕರಣದಲ್ಲಿ ಹೆಸರಿಸಲ್ಪಟ್ಟ 98 ಮಂದಿ ಜೀವಂತವಿರುವ ಆರೋಪಿಗಳ ಪೈಕಿ 46 ಮಂದಿಯ ವಿರುದ್ಧ ದೋಷಾರೋಪ ದಾಖಲಿಸಲಾಗಿದೆ.
ತಮ್ಮ ಮೇಲಿನ ಆರೋಪವನ್ನು ಆರೋಪಿಗಳು ತಳ್ಳಿಹಾಕಿದ್ದಾರೆ ಹಾಗೂ ಈ ಪ್ರಕರಣವು ರಾಜಕೀಯ ಪ್ರೇರಿತವೆಂದು ಹೇಳಿದ್ದಾರೆ.
ಈ ಮಧ್ಯೆ ಜಾರಿ ನಿರ್ದೇಶನಾಲಯವು ಪ್ರಕರಣದ ಜೊತೆ ನಂಟು ಹೊಂದಿರುವ ಕಪ್ಪುಹಣ ಬಿಳುಪು ಪ್ರಕರಣದ ತನಿಖೆಯನ್ನು ಕೂಡಾ ಮುಂದುವರಿಸಿದೆ ಹಾಗೂ ಅಪರಾಧದಿಂದ ಬಂದ ಆದಾಯವೆಂದು ಆರೋಪಿಸಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ.







