ಅದಾನಿ ಗ್ರೂಪ್ ಕುರಿತು ವರದಿಗಳಿಗೆ ನಿರ್ಬಂಧದ ವಿರುದ್ಧ ಪತ್ರಕರ್ತನ ಮೇಲ್ಮನವಿ: ಆದೇಶ ಕಾಯ್ದಿರಿಸಿದ ದಿಲ್ಲಿ ಕೋರ್ಟ್

ಗೌತಮ್ ಅದಾನಿ (Photo: PTI)
ಹೊಸದಿಲ್ಲಿ: ತಾನು ಅದಾನಿ ಗ್ರೂಪ್ ವಿರುದ್ಧ ವರದಿಗಳನ್ನು ಪ್ರಕಟಿಸುವುದನ್ನು ನಿರ್ಬಂಧಿಸಿ ಕೆಳ ನ್ಯಾಯಾಲಯವು ಸೆ.6ರಂದು ಹೊರಡಿಸಿದ ಏಕಪಕ್ಷೀಯ ಆದೇಶವನ್ನು ಪ್ರಶ್ನಿಸಿ ಪತ್ರಕರ್ತ ಪರಂಜಯ ಗುಹಾ ಠಾಕುರ್ತಾ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ತೀರ್ಪನ್ನು ದಿಲ್ಲಿ ಜಿಲ್ಲಾ ನ್ಯಾಯಾಲಯವು ಗುರುವಾರ ಕಾಯ್ದಿರಿಸಿದೆ.
ರೋಹಿಣಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಸುನಿಲ ಚೌಧರಿಯವರು ಎರಡೂ ಕಡೆಗಳ ವಾದಗಳನ್ನು ಆಲಿಸಿದ ಬಳಿಕ ಆದೇಶವನ್ನು ಕಾಯ್ದಿರಿಸಿದರು.
ವಿಚಾರಣೆ ಸಮಯದಲ್ಲಿ ನ್ಯಾಯಾಧೀಶರು, ಮಾನಹಾನಿಕರ ಎನ್ನಲಾಗಿರುವ ಲೇಖನಗಳಲ್ಲಿ ಗುಹಾ ಪ್ರತಿಪಾದಿಸಿರುವ ಹೇಳಿಕೆಗಳನ್ನು ದೃಢೀಕರಿಸಲು ಪುರಾವೆಗಳನ್ನು ಅವರು ಹೊಂದಿದ್ದಾರೆಯೇ ಎಂದು ಮೌಖಿಕವಾಗಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗುಹಾ ಪರ ಹಿರಿಯ ವಕೀಲ ತ್ರಿದೀಪ ಪಾಯಸ್,ಅವರ ಬಳಿ ಸಾಕಷ್ಟು ವಿಷಯಗಳಿವೆ. ಅವರೋರ್ವ ಜವಾಬ್ದಾರಿಯುತ ಪತ್ರಕರ್ತರಾಗಿದ್ದಾರೆ. ವಿವರಣೆಗಾಗಿ ಅವರನ್ನು ಕರೆದಿದ್ದರೆ ಅವರೇ ಸ್ವತಃ ವಿವರಿಸುತ್ತಿದ್ದರು ಎಂದು ತಿಳಿಸಿದರು.
ಆಕ್ಷೇಪಾರ್ಹ ಆದೇಶವು ಏಕಪಕ್ಷೀಯ ನಿರ್ಬಂಧಕಾಜ್ಞೆಯನ್ನು ಹೊರಡಿಸಲು ಕಾರಣಗಳನ್ನು ಒಳಗೊಂಡಿಲ್ಲ, ಲೇಖನದ ಯಾವ ಭಾಗವು ಮಾನಹಾನಿಕರವಾಗಿದೆ ಎನ್ನುವುದನ್ನು ಅದು ಬೆಟ್ಟು ಮಾಡಿಲ್ಲ, ಅಲ್ಲದೆ ಅರ್ಜಿದಾರರ(ಅದಾನಿ ಎಂಟರ್ಪ್ರೈಸಸ್ ಲಿ.) ವಿರುದ್ಧ ಮಾತ್ರವಲ್ಲ, ಕಕ್ಷಿಗಳೇ ಅಲ್ಲದ ಅದರ ಗ್ರೂಪ್ ಕಂಪನಿಗಳ ವಿರುದ್ಧವೂ ಯಾವುದೇ ವರದಿಯನ್ನು ಪ್ರಕಟಿಸುವುದನ್ನೂ ನಿರ್ಬಂಧಿಸಿದೆ ಎಂದು ಗುಹಾ ಮುಖ್ಯವಾಗಿ ವಾದಿಸಿದ್ದಾರೆ.
ಅದಾನಿ ಎಂಟರ್ಪ್ರೈಸಸ್ ಪರ ಹಿರಿಯ ವಕೀಲರಾದ ಅನುರಾಗ ಅಹ್ಲುವಾಲಿಯಾ, ಜಗದೀಪ ಶರ್ಮಾ ಮತ್ತು ವಿಜಯ ಅಗರ್ವಾಲ್ ಅವರು, ಕಂಪನಿಯ ವಿರುದ್ಧ ನಿರಂತರವಾಗಿ ಯಾವುದೇ ಆಧಾರ ಅಥವಾ ಪುರಾವೆಯಿಲ್ಲದ ಮಾನಹಾನಿಕರ ಲೇಖನಗಳನ್ನು ಪ್ರಕಟಿಸಲಾಗಿದೆ ಎಂದು ವಾದಿಸಿದರು. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಗುಹಾ ಸ್ವತಃ ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್ಡಿಎ) ನಿಗಾದಲ್ಲಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ನಿರ್ಬಂಧಕ ಆದೇಶವನ್ನು ಪ್ರಶ್ನಿಸಿ ಪತ್ರಕರ್ತರಾದ ರವಿ ನಾಯರ್, ಆಬಿರ್ ದಾಸಗುಪ್ತಾ, ಆಯಸ್ಕಾಂತ ದಾಸ್ ಮತ್ತು ಆಯುಷ್ ಜೋಶಿ ಅವರು ಸಲ್ಲಿಸಿರುವ ಇಂತಹುದೇ ಅರ್ಜಿಯನ್ನೂ ಇಂದು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು.
ಉಭಯ ಕಡೆಗಳ ವಾದಗಳನ್ನು ಆಲಿಸಿದ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿ ಆದೇಶಿಸಿತು.







