ದಿಲ್ಲಿ: ಕುಡಿದ ಮತ್ತಿನಲ್ಲಿ ಫುಟ್ಪಾತ್ನಲ್ಲಿ ಮಲಗಿದ್ದವರ ಮೇಲೆ ಕಾರು ಚಲಾಯಿಸಿದ ಚಾಲಕ; ಐವರಿಗೆ ಗಾಯ

PC : NDTV
ಹೊಸದಿಲ್ಲಿ: ಚಾಲಕ ಕುಡಿದ ಮತ್ತಿನಲ್ಲಿ ಆಡಿ ಕಾರನ್ನು ಫುಟ್ಪಾತ್ನಲ್ಲಿ ಮಲಗಿದ್ದವರ ಮೇಲೆ ಚಲಾಯಿಸಿದ ಪರಿಣಾಮ ಎಂಟರ ಹರೆಯದ ಬಾಲಕಿ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜು.9ರಂದು ಬೆಳಗಿನ ಜಾವ ನೈರುತ್ಯ ದಿಲ್ಲಿಯ ವಸಂತ ವಿಹಾರದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಉತ್ಸವ ಶೇಖರ್(40) ಆರೋಪಿ ಚಾಲಕನಾಗಿದ್ದು, ಶಿವ ಕ್ಯಾಂಪ್ ಎದುರಿನ ಪೆಟ್ರೋಲ್ ಪಂಪ್ ಸಮೀಪ ನಸುಕಿನ 1:45ರ ಸುಮಾರಿಗೆ ಈ ದುರಂತ ಸಂಭವಿಸಿದೆ.
ಏಕಾಏಕಿ ಫುಟ್ಪಾತ್ ಮೇಲೆ ಹತ್ತಿದ್ದ ಕಾರು ಮಲಗಿದ್ದವರ ಮೇಲೆ ಹರಿದಿತ್ತು,ಬಳಿಕ ಸುಮಾರು 200 ಮೀ.ಮುಂದಕ್ಕೆ ಚಲಿಸಿ ನಿಲ್ಲಿಸಲಾಗಿದ್ದ ಟ್ರಕ್ವೊಂದಕ್ಕೆ ಢಿಕ್ಕಿ ಹೊಡೆದು ನಿಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಪೋಲಿಸರಿಗೆ ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಶೇಖರ್ ನೊಯ್ಡಾದಿಂದ ದ್ವಾರಕಾದ ಮನೆಗೆ ಮರಳುತ್ತಿದ್ದ ಎನ್ನಲಾಗಿದೆ.
ಶೇಖರ್ನನ್ನು ಪೋಲಿಸರು ಬಂಧಿಸಿದ್ದು,ಅಪಘಾತದ ಸಮಯದಲ್ಲಿ ಆತ ಮದ್ಯ ಸೇವಿಸಿದ್ದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿದೆ.
ಲಾಧಿ(40),ಆಕೆಯ ಪತಿ ಸಬಾಮಿ ಅಲಿಯಾಸ್ ಚಿರ್ಮಾ(45),ಪುತ್ರಿ ಬಿಮ್ಲಾ(8),ರಾಮಚಂದರ್(45) ಮತ್ತು ಆತನ ಪತ್ನಿ ನಾರಾಯಣಿ(35) ಗಾಯಾಳುಗಳಾಗಿದ್ದು, ಕೂಲಿ ಕಾರ್ಮಿಕರಾಗಿರುವ ಇವರೆಲ್ಲರೂ ರಾಜಸ್ಥಾನದ ನಿವಾಸಿಗಳಾಗಿದ್ದಾರೆ.
ಪೋಲಿಸರು ಆಗಮಿಸುವ ಮೊದಲೇ ಸ್ಥಳಿಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದ್ದು,ಚಿಕಿತ್ಸೆ ಪಡೆಯುತ್ತಿದ್ದಾರೆ.





