ದಿಲ್ಲಿ: 3 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ

PC | PTI
ಹೊಸದಿಲ್ಲಿ, ಜು. 14: ಕೇಂದ್ರ ದಿಲ್ಲಿಯ ಚಾಣಕ್ಯ ಪುರಿ ಹಾಗೂ ನೈಋತ್ಯ ದಿಲ್ಲಿಯ ದ್ವಾರಕಾ ಪ್ರದೇಶದ ಎರಡು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಕೂಡಲೇ ಜಾಗೃತರಾದರು.
ಚಾಣಕ್ಯ ಪುರಿಯಲ್ಲಿರುವ ನೌಕಾ ಪಡೆಯ ಶಾಲೆ ಹಾಗೂ ದ್ವಾರಕಾದ ಸಿಆರ್ಪಿಎಫ್ ಶಾಲೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹೆತ್ತವರು ಆತಂಕಿತರಾದರು.
ದಿಲ್ಲಿ ಪೊಲೀಸ್ ನ ಬಾಂಬ್ ನಿಷ್ಕ್ರಿಯ ದಳ ಹಾಗೂ ಇತರ ಭದ್ರತಾ ಸಂಸ್ಥೆಗಳು ಸ್ಥಳಕ್ಕೆ ಧಾವಿಸಿದವು. ಕೂಲಂಕಷ ತನಿಖೆ ನಡೆಸಿದವು. ಆದರೆ, ಯಾವುದೇ ಸಂದೇಹಾಸ್ಪದ ವಸ್ತು ಪತ್ತೆಯಾಗಿಲ್ಲ. ಅನಂತರ ಇದು ಹುಸಿ ಬಾಂಬ್ ಕರೆ ಎಂದು ತಿಳಿಯಿತು.
ದಿಲ್ಲಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಹಲವು ಶಾಲೆಗಳು ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದು, ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಹಾಗೂ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.





