ಇರಾನ್ನಿಂದ 280 ಭಾರತೀಯರನ್ನು ದಿಲ್ಲಿಗೆ ಕರೆತಂದ 'ಮಾಹಾನ್ ಏರ್' ವಿಮಾನ

PC : aljazeera.com
ಹೊಸದಿಲ್ಲಿ: ಆಪರೇಷನ್ ಸಿಂಧು ಮೂಲಕ ಈವರೆಗೆ ಭಾರತವು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆ ಇರಾನಿನಲ್ಲಿ ಸಿಕ್ಕಿಹಾಕಿಕೊಂಡಿದ್ದ 1,428 ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಮರಳಿ ಕರೆತಂದಿದೆ.
ರವಿವಾರ ಮಾಷಾದ್ ನಿಂದ 280ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತಿದ್ದ ವಿಮಾನ ಹಾಗೂ 311 ಭಾರತೀಯ ಪ್ರಜೆಗಳಿದ್ದ ಇನ್ನೊಂದು ವಿಮಾನ ದಿಲ್ಲಿಗೆ ಆಗಮಿಸಿದೆ.
ಅಧಿಕೃತ ಹೇಳಿಕೆಯಲ್ಲಿ ಸರಕಾರಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ಜಮ್ಮುಕಾಶ್ಮೀರ ವಿದ್ಯಾರ್ಥಿಗಳ ಸಂಘವು, ವಿದ್ಯಾರ್ಥಿಗಳು ವಾಪಸ್ ಬಂದಿರುವುದು ಹೆಚ್ಚಿನ ನೆಮ್ಮದಿಯನ್ನು ನೀಡಿದೆ ಎಂದು ತಿಳಿಸಿದೆ.
ಇರಾನಿನ ಯುದ್ಧವಲಯದಲ್ಲಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದ ಈ ವಿದ್ಯಾರ್ಥಿಗಳು ಕೊನೆಗೂ ತಮ್ಮ ತಾಯ್ನಾಡಿಗೆ,ವಿಶೇಷವಾಗಿ ಕಾಶ್ಮೀರದಲ್ಲಿ ತಮಗಾಗಿ ಕಾಯುತ್ತಿದ್ದ ಕುಟುಂಬಗಳ ಬಳಿಗೆ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಅದು ಹೇಳಿದೆ.
ಶನಿವಾರ ಮಾಹಾನ್ ಏರ್ ನ ಎರಡು ವಿಮಾನಗಳು ಒಟ್ಟು 310 ಭಾರತೀಯ ವಿದ್ಯಾರ್ಥಿಗಳೊಂದಿಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದವು.
ಇರಾನ್-ಇಸ್ರೇಲ್ ನಡುವಿನ ಯುದ್ಧವು ರವಿವಾರ 10ನೇ ದಿನವನ್ನು ಪ್ರವೇಶಿಸಿದ್ದು,ಇರಾನಿನ ಮೂರು ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸುವ ಮೂಲಕ ಅಮೆರಿಕವು ಇಸ್ರೇಲ್ನೊಂದಿಗೆ ಕೈಜೋಡಿಸಿದೆ.







