ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು 15ರಿಂದ 5 ಕೋ.ರೂ.ಗೆ ತಗ್ಗಿಸಿದ ದಿಲ್ಲಿ ಸರಕಾರ

ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ | PTI
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರಕಾರವು ಶಾಸಕರ ವಾರ್ಷಿಕ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಮೂರನೇ ಎರಡರಷ್ಟು ಅಂದರೆ 15 ಕೋ.ರೂ.ಗಳಿಂದ ಐದು ಕೋ.ರೂ.ಗೆ ಕಡಿತಗೊಳಿಸಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದಾಗ ಆಪ್ ಸರಕಾರವು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು 10 ಕೋ.ರೂ.ಗಳಿಂದ 15 ಕೋ.ರೂ.ಗಳಿಗೆ ಹೆಚ್ಚಿಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಆಪ್ ಅನ್ನು ಪದಚ್ಯುತಗೊಳಿಸಿತ್ತು.
ಸಚಿವ ಸಂಪುಟದ ನಿರ್ಧಾರಕ್ಕೆ ಅನುಗುಣವಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿಧಿ ಹಂಚಿಕೆಯನ್ನು 2025-26ರ ವಿತ್ತವರ್ಷದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಐದು ಕೋ.ರೂ.ಗಳಿಗೆ ನಿಗದಿಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯು ಇತ್ತೀಚಿಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಇದೊಂದು ಮುಕ್ತ ನಿಧಿಯಾಗಿದ್ದು,ಯಾವುದೇ ಮಿತಿಯಿಲ್ಲದೆ ಬಂಡವಾಳ ಸ್ವರೂಪದ ಅನುಮೋದಿತ ಕಾರ್ಯಗಳಿಗೆ ಹಾಗೂ ಸಾರ್ವಜನಿಕ ಸ್ವತ್ತುಗಳ ರಿಪೇರಿ ಮತ್ತು ನಿರ್ವಹಣೆಗೆ ವೆಚ್ಚ ಮಾಡಬಹುದು ಎಂದೂ ಸಚಿವ ಸಂಪುಟವು ತಿಳಿಸಿದೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಸರಕಾರವು 350 ಕೋ.ರೂ.ಗಳನ್ನು ಮೀಸಲಿರಿಸಿದ್ದು,ದಿಲ್ಲಿಯ 70
ಶಾಸಕರಿಗೆ ತಲಾ ಐದು ಕೋ.ರೂ.ಗಳ ಹಂಚಿಕೆಯನ್ನು ಮಾಡಲಾಗುವುದು ಎಂದು ಬಿಜೆಪಿ ಶಾಸಕರೋರ್ವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಹಿಂದಿನ ಆಪ್ ಆಡಳಿತದಲ್ಲಿ 2021-22 ಮತ್ತು 2022-23ರಲ್ಲಿ ಪ್ರತಿ ಶಾಸಕರಿಗೆ ನಾಲ್ಕು ಕೋ.ರೂ.ಗಳನ್ನು ಒದಗಿಸಲಾಗಿದ್ದು, 2023-24ರಲ್ಲಿ ಏಳು ಕೋ.ರೂ.ಗಳಿಗೆ ಮತ್ತು ಅಂತಿಮವಾಗಿ ಕಳೆದ ವರ್ಷ 15 ಕೋ.ರೂ.ಗಳಿಗೆ ಹೆಚ್ಚಿಸಲಾಗಿತ್ತು.







