ಕೇವಲ 5 ರೂ.ಗೆ ಊಟ!; 100 ಅಟಲ್ ಕ್ಯಾಂಟೀನ್ ಗಳಿಗೆ ಚಾಲನೆ ನೀಡಿದ ದಿಲ್ಲಿ ಸರಕಾರ

Photo Credit : PTI
ಹೊಸದಿಲ್ಲಿ,ಡಿ.25: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರ ರಾಜಧಾನಿಯಾದ್ಯಂತ ಕೇವಲ 5 ರೂ.ಗೆ ಊಟವನ್ನು ಒದಗಿಸುವ 100 ಅಟಲ್ ಕ್ಯಾಂಟೀನ್ ಗಳನ್ನು ಆರಂಭಿಸುವ ತನ್ನ ಮಹತ್ವದ ಯೋಜನೆಗೆ ದಿಲ್ಲಿ ಸರಕಾರವು ಗುರುವಾರ ನಾಂದಿ ಹಾಡಿದೆ.
ಬಿಜೆಪಿಯ ದಿಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖ ಭರವಸೆಯಾಗಿದ್ದ ಈ ಉಪಕ್ರಮವು ನಗರದಾದ್ಯಂತ ಜನರಿಗೆ ಅಗ್ಗದ ಮತ್ತು ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.
ಅಟಲ್ ಕ್ಯಾಂಟೀನ್ ಗಳನ್ನು ವಿಶೇಷವಾಗಿ, ಎರಡು ಹೊತ್ತಿನ ಊಟಕ್ಕಾಗಿ ಹೋರಾಡುವ ದಿನಗೂಲಿ ಕಾರ್ಮಿಕರು, ಶ್ರಮಜೀವಿಗಳು ಮತ್ತು ಕಡಿಮೆ ಆದಾಯದ ಕುಟುಂಬಗಳ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.
ಯೋಜನೆಯು ಘನತೆಯೊಂದಿಗೆ ಆಹಾರವನ್ನು ಒದಗಿಸುವ ಪರಿಕಲ್ಪನೆಯಲ್ಲಿ ಬೇರೂರಿದೆ ಎಂದು ಹೇಳಿರುವ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಅಟಲ್ ಕ್ಯಾಂಟೀನ್ ದಿಲ್ಲಿಯ ಆತ್ಮವಾಗಲಿದೆ. ದಿಲ್ಲಿಯಲ್ಲಿ ಯಾರೂ ಹಸಿವಿನೊಂದಿಗೆ ಮಲಗಬಾರದು ಎಂದಿದ್ದಾರೆ.
ಪ್ರತಿ ಅಟಲ್ ಕ್ಯಾಂಟೀನ್ ದಿನಕ್ಕೆ ಎರಡು ಊಟಗಳನ್ನು ಪೂರೈಸಲಿದ್ದು, ಇವು ದಾಲ್, ಅನ್ನ, ರೋಟಿ ಮತ್ತು ತರಕಾರಿಗಳನ್ನು ಒಳಗೊಂಡಿರುತ್ತವೆ. ಪ್ರತಿ ಕ್ಯಾಂಟೀನ್ ದಿನಕ್ಕೆ ಸುಮಾರು 1,000 ಜನರ ಹಸಿವನ್ನು ತಣಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರತಿ ಊಟದ ದರ 5 ರೂ.ಗೆ ಸ್ಥಿರವಾಗಿರುವಂತೆ ನೋಡಿಕೊಳ್ಳಲು ಸರಕಾರವು ಅಧಿಕ ಸಬ್ಸಿಡಿಯನ್ನು ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಯೋಜನೆಯ ಮೊದಲ ಹಂತದ ನೂರು ಕ್ಯಾಂಟೀನ್ ಗಳ ಪೈಕಿ 45 ಗುರುವಾರ ಆರಂಭಗೊಂಡಿದ್ದು, ಉಳಿದ 55 ಕ್ಯಾಂಟೀನ್ ಗಳು ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿವೆ.
ಅಕ್ರಮಗಳನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ಊಟಗಳ ವಿತರಣೆಗೆ ಸಿಬ್ಬಂದಿಗಳು ಕೂಪನ್ ನೀಡುವ ಬದಲು ಡಿಜಿಟಲ್ ಟೋಕನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಎಲ್ಲ ಕ್ಯಾಂಟೀನ್ ಗಳು ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿರಲಿವೆ.







