ಗೃಹಿಣಿಯರ ಕೊಡುಗೆಯನ್ನು ಗುರುತಿಸುವ ಕಾಲ ಬಂದಿದೆ: ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಗೃಹಿಣಿಯರ ಕೊಡುಗೆಯನ್ನು ಗುರುತಿಸುವಲ್ಲಿ ಶಾಸನಾತ್ಮಕ ವ್ಯವಸ್ಥೆಯ ಗೈರನ್ನು ಒತ್ತಿ ಹೇಳಿದ ದಿಲ್ಲಿ ಹೈಕೋರ್ಟ್, “ಗೃಹಿಣಿಯರ ಕೊಡುಗೆಯನ್ನು ಗುರುತಿಸುವ ಕಾಲ ಬಂದಿದ್ದು, ಆಸ್ತಿಗಳ ಮಾಲಕತ್ವ ಹಕ್ಕಿನ ವಿಚಾರಕ್ಕೆ ಬಂದಾಗ ಗೃಹಿಣಿಯರ ಕೊಡುಗೆಯನ್ನು ಬಚ್ಚಿಡಲಾಗಿದೆ ಅಥವಾ ಉಪೇಕ್ಷಿಸಲಾಗಿದೆ” ಎಂದು ಅಭಿಪ್ರಾಯಪಟ್ಟಿದೆ.
ಆಸ್ತಿಯಲ್ಲಿ ತನಗೂ ಸಮಾನ ಹಕ್ಕಿದೆ ಎಂಬ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ನ್ಯಾ. ಅನಿಲ್ ಕ್ಷೇತ್ರಪಾಲ್ ಹಾಗೂ ನ್ಯಾ. ಹರೀಶ್ ವೈದ್ಯನಾಥನ್ ಶಂಕರ್ ಅವರನ್ನೊಳಗೊಂಡ ನ್ಯಾಯಪೀಠ ಮೇಲಿನಂತೆ ಅಭಿಪ್ರಾಯಪಟ್ಟಿತು.
“ಗೃಹಿಣಿಯರ ಕೊಡುಗೆಯನ್ನು ಬಚ್ಚಿಡಲಾಗಿರುವುದರಿಂದ ಅಥವಾ ಉಪೇಕ್ಷಿಸಲಾಗಿರುವುದರಿಂದ, ಗೃಹಿಣಿಯರ ಕೊಡುಗೆಯನ್ನು ಗುರುತಿಸುವ ಕಾಲ ಬಂದಿದೆ ಎಂಬ ಅರ್ಥಪೂರ್ಣ ನಿಲುವಿಗೆ ತಲುಪಬೇಕಾದ ಸಮಯ ಬಂದಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಆದರೆ, ಸದ್ಯ ಗೃಹಿಣಿಯರ ಕೊಡುಗೆಯನ್ನು ಮೌಲ್ಯಮಾಪನ ಮಾಡುವಂತಹ ಯಾವುದೇ ಶಾಸನಾತ್ಮಕ ನೆಲೆ ಇಲ್ಲದಿರುವುದನ್ನೂ ನಾವು ಪರಿಗಣಿಸುತ್ತೇವೆ” ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ದಿಲ್ಲಿ ಹೈಕೋರ್ಟ್ ಎತ್ತಿ ಹಿಡಿದರೂ, ಗೃಹಿಣಿಯರ ಕೊಡುಗೆಯನ್ನು ಅರ್ಥಪೂರ್ಣವಾಗಿ ಗುರುತಿಸುವ ಶಾಸನಾತ್ಮಕ ಕ್ರಮಗಳನ್ನು ಜಾರಿಗೊಳಿಸಬೇಕಾದ ಸಮಯ ಇದಾಗಿದೆ ಎಂದೂ ಹೇಳಿತು.







