ಭದ್ರತಾ ಪರವಾನಗಿ ರದ್ದತಿಯ ವಿರುದ್ಧ ತುರ್ಕಿಯಾದ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ: ಕೇಂದ್ರ ಸರಕಾರ ತನ್ನ ಭದ್ರತಾ ಪರವಾನಗಿಯನ್ನು ರದ್ದುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ತುರ್ಕಿಯಾ ಮೂಲದ ಸೆಲೆಬಿ ಗ್ರೌಂಡ್ ಹ್ಯಾಂಡ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ.
ಇಂತಹುದೇ ಅರ್ಜಿಗಳನ್ನು ಈ ಮುನ್ನ ವಜಾಗೊಳಿಸಲಾಗಿತ್ತು ಎಂದು ಉಲ್ಲೇಖಿಸಿದ ನ್ಯಾ. ತೇಜಸ್ ಕಾರಿಯಾ, ‘ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂಬ ಒಂದು ಸಾಲಿನ ತೀರ್ಪನ್ನು ಪ್ರಕಟಿಸಿದರು.
ಇದಕ್ಕೂ ಮುನ್ನ, ರಾಷ್ಟ್ರೀಯ ಭದ್ರತಾ ಕಳವಳವನ್ನು ಮುಂದು ಮಾಡಿ, ತನ್ನ ಭದ್ರತಾ ಪರವಾನಗಿಯನ್ನು ರದ್ದುಗೊಳಿಸಿದ್ದ ವಾಯುಯಾನ ನಿಗಾ ಸಂಸ್ಥೆಯಾದ ನಾಗರಿಕ ವಿಮಾನ ಯಾನ ಸುರಕ್ಷತಾ ದಳದ ಕ್ರಮವನ್ನು ಪ್ರಶ್ನಿಸಿ ತುರ್ಕಿಯಾ ಮೂಲದ ಸೆಲೆಬಿ ಏರ್ ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಸೆಲೆಬಿ ದಿಲ್ಲಿ ಕಾರ್ಗೊ ಟರ್ಮಿನಲ್ ಮ್ಯಾನೇಜ್ ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಜುಲೈ 7ರಂದು ದಿಲ್ಲಿ ಹೈಕೋರ್ಟ್ ನ ಮತ್ತೊಂದು ನ್ಯಾಯಪೀಠ ಕೂಡಾ ರದ್ದುಗೊಳಿಸಿತ್ತು.
ತುರ್ಕಿಯಾವು ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ನಂತರ ಹಾಗೂ ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ ಭಾರತದ ವಾಯು ದಾಳಿಯನ್ನು ಖಂಡಿಸಿದ ಬೆನ್ನಿಗೇ, ನಾಗರಿಕ ವಿಮಾನ ಯಾನ ಸುರಕ್ಷತಾ ದಳವು ತುರ್ಕಿಯಾ ಮೂಲದ ಈ ಕಂಪೆನಿಗಳ ಭದ್ರತಾ ಪರವಾನಗಿಯನ್ನು ರದ್ದುಗೊಳಿಸಿತ್ತು.





