ಮಾನನಷ್ಟ ಮೊಕದ್ದಮೆ: ದಿಲ್ಲಿ ಹೈಕೋರ್ಟ್ ನಿಂದ ಶಶಿ ತರೂರ್ ಗೆ ನೋಟಿಸ್

ಶಶಿ ತರೂರ್ (PTI)
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಸಲ್ಲಿಕೆಯಾಗಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ವಜಾಗೊಳಿಸಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿ ವಿಚಾರಣೆ ನಡೆಸುತ್ತಿರುವ ದಿಲ್ಲಿ ಹೈಕೋರ್ಟ್, ಈ ಕುರಿತು ತಮ್ಮ ನಿಲುವನ್ನು ತಿಳಿಸುವಂತೆ ಶಶಿ ತರೂರ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಫೆಬ್ರವರಿ 4ರಂದು ರಾಜೀವ್ ಚಂದ್ರಶೇಖರ್ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದು ನ್ಯಾ. ರವೀಂದರ್ ದುಡೇಜಾ ಅಭಿಪ್ರಾಯಪಟ್ಟಿದ್ದು, ಈ ಸಂಬಂಧ ಶಶಿ ತರೂರ್ ಗೆ ನೋಟಿಸ್ ಜಾರಿಗೊಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನಾಯಕರು ತಿರುವನಂತಪುರಂ ಕ್ಷೇತ್ರದ ಮತದಾರರಿಗೆ ಲಂಚ ಹಾಗೂ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ, ಮಲಯಾಳಂ ಸುದ್ದಿ ವಾಹಿನಿಯೊಂದರಲ್ಲಿ ಸುಳ್ಳು ಹಾಗೂ ಅಪಮಾನಕರ ಹೇಳಿಕೆಗಳನ್ನು ನೀಡುವ ಮೂಲಕ, ಶಶಿ ತರೂರ್ ತನಗೆ ಮಾನಹಾನಿಯೆಸಗಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಪರಿಷ್ಕರಣಾ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಅವರ ಪ್ರಕಾರ, ತನ್ನ ಖ್ಯಾತಿಯನ್ನು ಕುಗ್ಗಿಸಲು ಹಾಗೂ ಕಳೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲು ಶಶಿ ತರೂರ್ ಈ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಶಶಿ ತರೂರ್ ಯಾವುದೇ ಮಾನಹಾನಿಯೆಸಗಿಲ್ಲ ಎಂದು ತೀರ್ಪಿತ್ತಿರುವ ಕೆಳ ನ್ಯಾಯಾಲಯವು, ಸಾಕ್ಷ್ಯಗಳನ್ನು ನಿರ್ಲಕ್ಷಿಸಿದೆ ಎಂದು ರಾಜೀವ್ ಚಂದ್ರಶೇಖರ್ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲೆ ಅಮೃತಾ ಪಾಂಡಾ ವಾದಿಸಿದರು. ಕೆಳ ನ್ಯಾಯಾಲಯವು ಯಾವುದೆ ಮಾನನಷ್ಟವೆಸಗಲಾಗಿಲ್ಲ ಎಂದು ತೀರ್ಪು ನೀಡಲು ಸಾಕ್ಷ್ಯಗಳನ್ನು ನಿರ್ಲಕ್ಷಿಸಿದೆ ಎಂದೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.







