ಜಾಮಿಯಾ ಮಿಲ್ಲಿಯ ವಿದ್ಯಾರ್ಥಿಗಳ ಅಮಾನತಿಗೆ ದಿಲ್ಲಿ ಹೈಕೋರ್ಟ್ ತಡೆ

ದಿಲ್ಲಿ ಹೈಕೋರ್ಟ್ | PTI
ಹೊಸದಿಲ್ಲಿ: ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಪೂರ್ವಾನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪದಲ್ಲಿ ವಿ.ವಿ. ತನ್ನ ನಾಲ್ವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದು, ದಿಲ್ಲಿ ಉಚ್ಚ ನ್ಯಾಯಾಲಯ ಈ ಅಮಾನತಿಗೆ ಮಂಗಳವಾರ ತಡೆ ನೀಡಿದೆ.
ಸಮಸ್ಯೆಯನ್ನು ಪರಿಹರಿಸಲು ಉಪ ಕುಲಪತಿ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳ ಸಮಿತಿ ರೂಪಿಸುವಂತೆ ನ್ಯಾಯಾಲಯ ವಿಶ್ವವಿದ್ಯಾನಿಲಯಕ್ಕೆ ನಿರ್ದೇಶಿಸಿದೆ. ಈ ಸಮಸ್ಯೆಯ ಕುರಿತ ಚರ್ಚೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಕೂಡ ಪಾಲ್ಗೊಳ್ಳಬೇಕು ಎಂದು ಅದು ಆದೇಶಿಸಿದೆ.
ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ, ಈ ವಿಷಯದ ಕುರಿತು ವರದಿ ಸಲ್ಲಿಸಲು ವಿಶ್ವವಿದ್ಯಾನಿಲಯಕ್ಕೆ ನಿರ್ದೇಶಿಸಿದರು.
ತಮ್ಮನ್ನು ಅಮಾನತುಗೊಳಿಸಿ ಹಾಗೂ ಕ್ಯಾಂಪಸ್ ಪ್ರವೇಶಿಸುವುದಕ್ಕೆ ನಿಷೇಧ ವಿಧಿಸಿ ವಿಶ್ವವಿದ್ಯಾನಿಲಯದ ಶಿಸ್ತು ಪಾಲನಾಧಿಕಾರಿ ನೀಡಿದ ಆದೇಶ ಪ್ರಶ್ನಿಸಿ ನಾಲ್ವರು ಜಾಮಿಯಾ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿತು.





