ಸಹೋದರಿ ನಿಧನ | ವಿಶೇಷ ಕಲಾಪ ನಡೆಸಿ ಅಪರಾಧಿಗೆ ಪೆರೋಲ್ ನೀಡಿದ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ!

Photo: ndtv
ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ನ ನ್ಯಾಯಮೂರ್ತಿ ಸಂಜೀವ್ ನರುಲಾ ರವಿವಾರ ವಿಶೇಷ ಕಲಾಪ ನಡೆಸಿ, ಸಾಮೂಹಿಕ ಅತ್ಯಾಚಾರದ ಅಪರಾಧಿ ತಸ್ಲೀಮ್ ಅವರಿಗೆ ಸಹೋದರಿಯ ಸಾವಿನ ಹಿನ್ನೆಲೆಯಲ್ಲಿ ನಾಲ್ಕು ವಾರಗಳ ಪೆರೋಲ್ ಮಂಜೂರು ಮಾಡಿದ್ದಾರೆ.
ಬೆಳಿಗ್ಗೆ 10 ಗಂಟೆ ಸುಮಾರಿಗೆ ನ್ಯಾಯಮೂರ್ತಿ ನರುಲಾ ಅವರ ಕೋರ್ಟ್ ಮಾಸ್ಟರ್ ಗೆ ತಸ್ಲೀಮ್ ಅವರ ಪೆರೋಲ್ ಅರ್ಜಿ ಸಲ್ಲಿಸಲಾಯಿತು. ಬಳಿಕ ಮಧ್ಯಾಹ್ನ 12.30ಕ್ಕೆ ನ್ಯಾಯಮೂರ್ತಿ ನರುಲಾ ವರ್ಚುವಲ್ ಮೋಡ್ ನಲ್ಲಿ ತುರ್ತು ವಿಚಾರಣೆ ನಡೆಸಿದರು.
ತಸ್ಲೀಮ್ ಪರವಾಗಿ ಅವರ ವಕೀಲ ಸಾರ್ಥಕ್ ಮ್ಯಾಗೋನ್, ದಿಲ್ಲಿ ಪೊಲೀಸ್ ಉಪನಿರೀಕ್ಷಕರು ಹಾಗೂ ರಾಜ್ಯ ಅಡ್ವೊಕೇಟ್ ಜನರಲ್ ಆನ್ಲೈನ್ ಮೂಲಕ ವಿಚಾರಣೆಗೆ ಹಾಜರಾದರು. ಅರ್ಜಿಯ ತುರ್ತು ಸ್ವಭಾವ ಪರಿಗಣಿಸಿ, ನ್ಯಾಯಮೂರ್ತಿಯವರು 55 ವರ್ಷದ ತಸ್ಲೀಮ್ ಅವರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದರು.
ತಸ್ಲೀಮ್ ಅವರ 60 ಸಹೋದರಿ ಕ್ಷಯರೋಗದ ನಂತರ ಉಂಟಾದ ಶ್ವಾಸಕೋಶದ ತೊಂದರೆಗಳಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನವೆಂಬರ್ 7ರಂದು ಹೈಕೋರ್ಟ್ ತಸ್ಲೀಮ್ಗೆ ಒಂದು ದಿನದ ಕಸ್ಟಡಿ ಪೆರೋಲ್ ನೀಡಿತ್ತು, ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತಮ್ಮ ಅಸ್ವಸ್ಥ ಸಹೋದರಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತು.
ತಸ್ಲೀಮ್ ಅವರನ್ನು 1997ರಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಂಧಿಸಲಾಯಿತು. 1999ರಲ್ಲಿ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆ ವಿರೋಧಿಸಿದ ಮೇಲ್ಮನವಿಗಳನ್ನು ಹೈಕೋರ್ಟ್ (2015) ಮತ್ತು ಸುಪ್ರೀಂ ಕೋರ್ಟ್ (2017) ಎರಡೂ ತಿರಸ್ಕರಿಸಿದ್ದವು.
ಅದೇ ಪ್ರಕರಣದ ವಿಚಾರಣೆ ವೇಳೆ, ಕಳೆದ ಅಕ್ಟೋಬರ್ 8ರಂದು ಹೈಕೋರ್ಟ್ ಶಿಕ್ಷೆ ಪರಿಶೀಲನಾ ಮಂಡಳಿಯ (Sentence Review Board) ಕಾರ್ಯವಿಧಾನವನ್ನು ತರಾಟೆಗೆ ತೆಗೆದುಕೊಂಡಿತ್ತು. “ಈ ನ್ಯಾಯಾಲಯ ಕಳೆದ ಕೆಲವು ತಿಂಗಳಿನಿಂದ ಅಕಾಲಿಕ ಬಿಡುಗಡೆ ಕುರಿತ ಅನೇಕ ಅರ್ಜಿಗಳನ್ನು ವಿಚಾರಿಸುತ್ತಿದೆ. ಸಂತೋಷ್ ಕುಮಾರ್ ಸಿಂಗ್ ಪ್ರಕರಣದಲ್ಲಿ ನೀಡಲಾದ ನಿರ್ದೇಶನಗಳಂತೆ ಏಕರೂಪ ಮತ್ತು ತರ್ಕಬದ್ಧ ಕ್ರಮ ಅನುಸರಿಸಬೇಕಾಗಿದೆ,” ಎಂದು ಹೈಕೋರ್ಟ್ ಎಚ್ಚರಿಕೆ ನೀಡಿತ್ತು.
ಈ ಸಂಬಂಧ ಹೈಕೋರ್ಟ್ ದಿಲ್ಲಿ ಸರ್ಕಾರದ ಗೃಹ ಕಾರ್ಯದರ್ಶಿ ಮತ್ತು ಕಾರಾಗೃಹ ಮಹಾನಿರ್ದೇಶಕರನ್ನು ನ. 24ರಂದು ವಿಚಾರಣೆಗಾಗಿ ಹಾಜರಾಗುವಂತೆ ನಿರ್ದೇಶಿಸಿದೆ.







