ಸೋನಮ್ ವಾಂಗ್ಚುಕ್ ಬಂಧನ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ | ಅ. 3ರಂದು ವಿಚಾರಣೆ ಸಾಧ್ಯತೆ
ಸೋನಮ್ ವಾಂಗ್ಚುಕ್ | PC : PTI
ಹೊಸದಿಲ್ಲಿ: ದಿಲ್ಲಿ ಗಡಿಯಲ್ಲಿ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತಿತರರನ್ನು ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಮಂಗಳವಾರ ದಿಲ್ಲಿ ಹೈಕೋರ್ಟ್ ನಲ್ಲಿ ಅರ್ಜಿಗಳ ಸಲ್ಲಿಕೆಯಾಗಿದೆ.
ವಾಂಗ್ಚುಕ್ ಅವರ ಹತ್ತಿರದ ಸ್ನೇಹಿತನ ಪರವಾಗಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾ. ತುಷಾರ್ ರಾವ್ ಗೆಡೆಲ ಅವರನ್ನೊಳಗೊಂಡ ನ್ಯಾಯಪೀಠದೆದುರು ವಕೀಲರೊಬ್ಬರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಅಕ್ಟೋಬರ್ 3ರಂದು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಲಾಗಿದೆ.
ಒಂದು ವೇಳೆ ಅರ್ಜಿ ಕ್ರಮಬದ್ಧವಾಗಿದ್ದರೆ, ಅದೇ ದಿನದಂದು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದ ನ್ಯಾಯಾಲಯವು, ಬಂಧನದ ಸಂಬಂಧ ಸಲ್ಲಿಕೆಯಾಗಿರುವ ಮತ್ತೊಂದು ಅರ್ಜಿಯನ್ನೂ ವಿಚಾರಣೆಗೆ ಪಟ್ಟಿ ಮಾಡಲು ಈಗಾಗಲೇ ಅವಕಾಶ ನೀಡಲಾಗಿದೆ ಎಂದು ಹೇಳಿತು.
ಇದರೊಂದಿಗೆ, ವಾಂಗ್ಚುಕ್ ಬಂಧನವನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಆಝಾದ್ ಕೂಡಾ ಮತ್ತೆರಡು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ.
►ಹೇಬಿಯಸ್ ಕಾರ್ಪಸ್ ಅರ್ಜಿ ಎಂದರೇನು?
ಯಾವುದೇ ವ್ಯಕ್ತಿ ನಾಪತ್ತೆಯಾಗಿದ್ದರೆ ಅಥವಾ ಕಾನೂನುಬಾಹಿರ ಬಂಧನಕ್ಕೆ ಒಳಗಾಗಿದ್ದರೆ, ಅಂಥವರನ್ನು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರುಪಡಿಸುವಂತೆ ಕೋರಲು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಲಾಗುತ್ತದೆ.