ತುರ್ಕಿಯದ ವಿಮಾನ ಸೇವಾ ಸಂಸ್ಥೆಯ ಅರ್ಜಿಯನ್ನು ವಜಾಗೊಳಿಸಿದ ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | PC : delhihighcourt.nic.in
ಹೊಸದಿಲ್ಲಿ: ತನ್ನ ಭದ್ರತಾ ಅನುಮೋದನೆಯನ್ನು ನಾಗರಿಕ ವಾಯುಯಾನ ಭದ್ರತಾ ಸಂಸ್ಥೆ (ಬಿಸಿಎಎಸ್)ಯ ಮಹಾನಿರ್ದೇಶಕರು ರದ್ದುಪಡಿಸಿರುವುದನ್ನು ಪ್ರಶ್ನಿಸಿ ತುರ್ಕಿಯದ ವಿಮಾನ ನಿರ್ವಹಣಾ ಕಂಪೆನಿ ಸೆಲೆಬಿ ಏರ್ಪೋರ್ಟ್ ಸರ್ವಿಸಸ್ ಸಲ್ಲಿಸಿರುವ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಬಿಸಿಎಎಸ್ ಮೇ 15ರಂದು ತನ್ನ ಭದ್ರತಾ ಅನುಮೋದನೆಯನ್ನು ರದ್ದುಪಡಿಸಿತ್ತು. ಹಾಗಾಗಿ, ದೇಶದ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿನ ಅದರ ಕಾರ್ಯನಿರ್ವಹಣೆಯು ಸ್ಥಗಿತಗೊಂಡಿದೆ ಮತ್ತು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 10,000ಕ್ಕೂ ಅಧಿಕ ಉದ್ಯೋಗಿಗಳು ಅತಂತ್ರರಾಗಿದ್ದಾರೆ. ಭಾರತದ ‘ಆಪರೇಶನ್ ಸಿಂಧೂರ’ ಸೇನಾ ಕಾರ್ಯಾಚರಣೆಯ ವೇಳೆ, ಟರ್ಕಿಯು ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮತ್ತು ಸೇನಾ ಬೆಂಬಲ ನೀಡಿರುವುದಕ್ಕೆ ಪ್ರತಿಯಾಗಿ ಭಾರತದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
‘‘ನಾನು ಅರ್ಜಿಯನ್ನು ವಜಾಗೊಳಿಸಿದ್ದೇನೆ’’ ಎಂದು ತೀರ್ಪು ಪ್ರಕಟಿಸಿದ ನ್ಯಾ. ಸಚಿನ್ ದತ್ತ ಹೇಳಿದರು.
ಭದ್ರತಾ ಅನುಮೋದನೆಯ ರದ್ದತಿಯಿಂದಾಗಿ ದೇಶಾದ್ಯಂತವಿರುವ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತಾನು ಹೊಂದಿರುವ ಗುತ್ತಿಗೆ ಕೆಲಸಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ತನ್ನ ಅರ್ಜಿಯಲ್ಲಿ ಸೆಲೆಬಿ ಹೇಳಿದೆ. ಬಿಸಿಎಎಸ್ ತನ್ನ ಮೇ 15ರ ಸೂಚನೆಯನ್ನು ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿದೆ ಹಾಗೂ ಇಂಥ ಸೂಚನೆಗಳನ್ನು ಹೊರಡಿಸಲು ಅದಕ್ಕೆ ಅಧಿಕಾರವಿಲ್ಲ ಎಂದು ಅದು ಹೇಳಿತ್ತು.
ಸೆಲೆಬಿಯ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ, ಕಂಪೆನಿಗೆ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿಲು ಅವಕಾಶ ನೀಡದೆಯೇ ಬಿಸಿಎಎಸ್ ಏಕಪಕ್ಷಿಯವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವಾದಿಸಿದರು.
ಕೇಂದ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇಶದಲ್ಲಿ ಸದ್ಯ ನೆಲೆಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದ ವಿಮಾನ ನಿಲ್ದಾಣಗಳಿಗೆ ಎದುರಾಗಿರುವ ಸಂಭಾವ್ಯ ಬೆದರಿಕೆಯ ಕಾರಣದಿಂದ ಸೆಲೆಬಿಯ ಭದ್ರತಾ ಅನುಮೋದನೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು.







