ಸ್ವಾತಂತ್ರಪೂರ್ವ ಜನನವು ಭಾರತೀಯ ಮೂಲದ ವ್ಯಕ್ತಿಯನ್ನಾಗಿ ಪರಿಗಣಿಸಲು ಅರ್ಹತೆಯಾಗಿದೆ: ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | PC: delhihighcourt.nic.in
ಹೊಸದಿಲ್ಲಿ: ಹೆತ್ತವರ ಪೈಕಿ ಯಾರಾದರೊಬ್ಬರು 15,ಆಗಸ್ಟ್ 1947ಕ್ಕೆ ಮುನ್ನ ಭಾರತದಲ್ಲಿ ಜನಿಸಿದ್ದರೆ ಅಂತಹ ವ್ಯಕ್ತಿಯನ್ನು ನೋಂದಣಿಯ ಮೂಲಕ ಪೌರತ್ವಕ್ಕಾಗಿ ಭಾರತೀಯ ಮೂಲದ ವ್ಯಕ್ತಿ(ಪಿಐಒ)ಎಂದು ಪರಿಗಣಿಸಬಹುದು ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ಅಮೆರಿಕದ ಪೌರತ್ವ ಹೊಂದಿರುವ ಒಸಿಐ(ಸಾಗರೋತ್ತರ ಭಾರತೀಯ ಪ್ರಜೆ) ಕಾರ್ಡ್ ಹೊಂದಿರುವ ದಂಪತಿಗೆ ಭಾರತದಲ್ಲಿ ಜನಿಸಿದ 17ರ ಹರೆಯದ ಬಾಲಕಿಯು ನೋಂದಣಿಯ ಮೂಲಕ ಪೌರತ್ವವನ್ನು ಪಡೆಯಲು ತನ್ನನ್ನು ಪಿಐಒ ಎಂದು ಘೋಷಿಸಬೇಕು ಎಂದು ಕೋರಿಕೊಂಡಿದ್ದಾಳೆ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಡಿ.ಕೆ.ಉಪಾಧ್ಯಾಯ ಮತ್ತು ತುಷಾರ ರಾವ್ ಗಡೇಲಾ ಅವರ ಪೀಠದ ಮುಂದೆ ಪಿಐಒಗೆ ಸಂಬಂಧಿಸಿದ ಪರಿಗಣನೆಯ ವಿಷಯವು ಬಂದಿತ್ತು.
ಪ್ರಸ್ತುತ ಪ್ರಕರಣದಲ್ಲಿ ಬಾಲಕಿ ರಚಿತಾ ಫ್ರಾನ್ಸಿಸ್ ಝೇವಿಯರ್ 2006ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ್ದು, ಆಕೆಯ ಹೆತ್ತವರು 2001 ಮತ್ತು 2005ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದುಕೊಂಡಿದ್ದರು. ರಚಿತಾ 2019ರಲ್ಲಿ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಿದ್ದಳು, ಆದರೆ ಹೆತ್ತವರು ವಿದೇಶಿ ಪ್ರಜೆಗಳಾಗಿರುವುದರಿಂದ ಆಕೆಯನ್ನು ಭಾರತೀಯ ಪ್ರಜೆ ಎಂದು ಗುರುತಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆಕೆಯ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದು ಆಕೆಯನ್ನು ‘ದೇಶರಹಿತ’ಳನ್ನಾಗಿಸಿತ್ತು.
ಕಳೆದ ವರ್ಷದ ಮೇ ತಿಂಗಳಿನಲ್ಲಿ ಏಕ ನ್ಯಾಯಾಧೀಶ ಪೀಠದ ನ್ಯಾ.ಪ್ರತಿಭಾ ಎಂ.ಸಿಂಗ್ ಅವರು ಬಾಲಕಿಯ ಹೆತ್ತವರು ಸ್ವಾತಂತ್ರ್ಯಾನಂತರ ಭಾರತದಲ್ಲಿ ಜನಿಸಿರುವುದರಿಂದ ಮತ್ತು ನಂತರ ಅಮೆರಿಕದ ಪೌರತ್ವವನ್ನು ಪಡೆದಿರುವುದರಿಂದ ಪೌರತ್ವ ಕಾಯ್ದೆಯ ಕಲಂ 5ರಂತೆ ಆಕೆಗೆ ಪೌರತ್ವವನ್ನು ಮಂಜೂರು ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದ್ದರು. ಕಲಂ 5 ನೋಂದಣಿಯ ಮೂಲಕ ಭಾರತೀಯ ಪೌರತ್ವವನ್ನು ಪಡೆಯಲು ನಿಬಂಧನೆಗಳನ್ನು ವಿವರಿಸಿದೆ. ವಿವರಣೆ 2 ಕನಿಷ್ಠ ಓರ್ವ ಪೋಷಕರು ಅವಿಭಜಿತ ಭಾರತದಲ್ಲಿ ಅಥವಾ ಸ್ವಾತಂತ್ರ್ಯಾನಂತರ ಭಾರತದ ಭಾಗವಾಗಿರುವ ಇತರ ಯಾವುದೇ ಪ್ರದೇಶದಲ್ಲಿ ಜನಿಸಿದ್ದರೆ ಅಂತಹ ವ್ಯಕ್ತಿಯನ್ನು ಪಿಐಒ ಎಂದು ಪರಿಗಣಿಸಲಾಗುತ್ತದೆ ಎನ್ನುವುದನ್ನು ನಿರ್ದಿಷ್ಟ ಪಡಿಸಿದೆ.
ಆದಾಗ್ಯೂ ರಚಿತಾಳನ್ನು ಭಾರತೀಯ ಮೂಲದ ವ್ಯಕ್ತಿ ಎಂದು ಘೋಷಿಸಲು ನ್ಯಾ.ಸಿಂಗ್ ಅವರು ನೀಡಿದ ಕಾರಣವನ್ನು ತಳ್ಳಿ ಹಾಕುವಂತೆ ಕೋರಿ ಕೇಂದ್ರವು ವಿಭಾಗೀಯ ಪೀಠದ ಮೊರೆ ಹೋಗಿತ್ತು. ಭಾರತೀಯ ಮೂಲದ ವ್ಯಾಖ್ಯಾನವು ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲಿ ಜನಿಸಿದ ಹೆತ್ತವರನ್ನು ಮಾತ್ರ ಒಳಗೊಂಡಿದೆ ಎಂದು ಕೇಂದ್ರವು ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತ್ತು.
ಕೇಂದ್ರದ ನಿವೇದನೆಗಳನ್ನು ಒಪ್ಪಿಕೊಂಡ ಉಚ್ಚ ನ್ಯಾಯಾಲಯವು ಗುರುವಾರ ಬಿಡುಗಡೆಗೊಳಿಸಿದ ತನ್ನ ಜು.14ರ ಆದೇಶದಲ್ಲಿ ‘ನಮ್ಮ ಅಭಿಪ್ರಾಯದಲ್ಲಿ ಮೂಲತಃ ಜಾರಿಗೊಂಡಂತೆ 1935ರ ಕಾಯ್ದೆಯಲ್ಲಿಯ ವ್ಯಾಖ್ಯಾನದಂತೆ ವ್ಯಕ್ತಿ ಅಥವಾ ಪೋಷಕರಲ್ಲೋರ್ವರು ಅವಿಭಜಿತ ಭಾರತದಲ್ಲಿ ಜನಸಿದ್ದರೆ ಅಂತಹ ವ್ಯಕ್ತಿಯನು ಪಿಐಒ ಎಂದು ಪರಿಗಣಿಸಬೇಕೆಂದು ವಿವರಣೆ 2 ಹೇಳುತ್ತದೆ. ಅಂದರೆ,ಭಾರತೀಯ ಮೂಲದ ವ್ಯಕ್ತಿ ಸ್ಥಾನಮಾನವನ್ನು ಪಡೆಯಲು ಸಂಬಂಧಿತ ವ್ಯಕ್ತಿ ಅಥವಾ ಪೋಷಕರಲ್ಲೋರ್ವರು 15,ಆಗಸ್ಟ್ 1947ರ ಮುನ್ನ ಭಾರತದಲ್ಲಿ ಜನಿಸಿರಬೇಕು ಮತ್ತು ಅದರ ನಂತರವಲ್ಲ. ಪೌರತ್ವ ಕಾಯ್ದೆಯ ಕಲಂ 5(1)(ಜಿ)ಗೆ ಸೇರಿಸಲಾದ ವಿವರಣೆ 2 ವ್ಯಕ್ತಿ ಅಥವಾ ಹೆತ್ತವರಲ್ಲೋರ್ವರು 15-8 1947ರಂದು ಅಥವಾ ನಂತರ ಭಾರತದಲ್ಲಿ ಅಥವಾ 15-8-1947ರ ನಂತರ ಭಾರತದ ಭಾಗವಾಗಿರದ ಪ್ರದೇಶದಲ್ಲಿ ಜನಿಸಿದ್ದರೆ ಅಂತಹ ವ್ಯಕ್ತಿಯನ್ನು ಭಾರತೀಯ ಮೂಲದ ವ್ಯಕ್ತಿ ಎಂದು ಪರಿಗಣಿಸುವುದನ್ನು ಒಳಗೊಂಡಿಲ್ಲ ಎಂದು ಹೇಳಿದೆ.
ಉಚ್ಚ ನ್ಯಾಯಾಲಯವು ಅಂತಿಮವಾಗಿ ನ್ಯಾ.ಸಿಂಗ್ ಅವರ ಆದೇಶವನ್ನು ರದ್ದುಗೊಳಿಸಿದ್ದು,ನೋಂದಣಿ ಮೂಲಕ ಭಾರತೀಯ ಪೌರತ್ವವನ್ನು ನಿಯಂತ್ರಿಸುವ ಕಾನೂನಿನ ತಪ್ಪಾಗಿ ಓದುವಿಕೆಯನ್ನು ಈ ಆದೇಶವು ಆಧರಿಸಿದ್ದು, ದೋಷಯುಕ್ತವಾಗಿದೆ. ನ್ಯಾ.ಸಿಂಗ್ ಅವರ ಅವಲೋಕನಗಳು ತಪ್ಪಾಗಿವೆ ಎಂದು ಹೇಳಿದೆ.







