ಸಾಕುಪ್ರಾಣಿಗಳ ಕುರಿತು ಜಗಳ : ಮಕ್ಕಳಿಗೆ ಪಿಝ್ಝಾ, ಮಜ್ಜಿಗೆ ಹಂಚುವ ಶಿಕ್ಷೆ ವಿಧಿಸಿದ ದಿಲ್ಲಿ ಹೈಕೋರ್ಟ್

ಸಾಂದರ್ಭಿಕ ಚಿತ್ರ | PC: freepik.com
ಹೊಸದಿಲ್ಲಿ,ಸೆ.23: ತಮ್ಮ ಸಾಕುಪ್ರಾಣಿಗಳ ಕುರಿತು ವಿವಾದದಲ್ಲಿ ಪರಸ್ಪರ ಜಗಳವಾಡಿದ್ದ ಇಬ್ಬರ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ರದ್ದುಗೊಳಿಸಬೇಕಾದರೆ ಸರಕಾರಿ ಶಿಶುಪಾಲನಾ ಕೇಂದ್ರದ ಮಕ್ಕಳಿಗೆ ಪಿಝ್ಝಾ ಮತ್ತು ಮಜ್ಜಿಗೆ ಹಂಚುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಷರತ್ತು ವಿಧಿಸಿದೆ.
ಜಗಳವು ಖಾಸಗಿ ಸ್ವರೂಪದ್ದಾಗಿದ್ದು, ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಎಫ್ಐಆರ್ಗಳನ್ನು ಉಳಿಸಿಕೊಂಡರೆ ಅದು ದ್ವೇಷವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ರದ್ದುಗೊಳಿಸುವುದು ನೆರೆಹೊರೆಯವರ ನಡುವೆ ಸೌಹಾರ್ದ ಮತ್ತು ಸ್ನೇಹಪರತೆಯನ್ನು ಉತ್ತೇಜಿಸುತ್ತದೆ ಎಂದು ನ್ಯಾ.ಅರುಣ ಮೋಂಗಾ ಅವರ ಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.
ಮೇ 5ರಂದು ಘಟನೆ ನಡೆದಿದ್ದು , ಸಾಕುಪ್ರಾಣಿಗಳನ್ನು ನಿರ್ವಹಿಸುವ ವಿವಾದದಲ್ಲಿ ನೆರೆಕರೆಯವರು ಹೊಡೆದಾಡಿಕೊಂಡಿದ್ದರು. ಈ ಬಗ್ಗೆ ದೂರು-ಪ್ರತಿದೂರು ದಾಖಲಾಗಿದ್ದವು.
ನ್ಯಾಯಾಲಯದ ಮುಂದೆ ವೈಯಕ್ತಿಕವಾಗಿ ಹಾಜರಾಗಿದ್ದ ಉಭಯ ಕಡೆಗಳವರು ತಾವು ವಿವಾದವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿಕೊಂಡಿದ್ದೇವೆ ಮತ್ತು ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದರು. ವಿಚಾರಣೆ ಸಮಯದಲ್ಲಿ ದೂರುದಾರರ ಪೈಕಿ ಓರ್ವ ಪಿಝ್ಝಾಗಳ ತಯಾರಕ ಎನ್ನುವುದನ್ನು ನ್ಯಾಯಾಲಯವು ಗಮನಿಸಿತ್ತು.
ಉಭಯ ಕಡೆಗಳ ಅಹವಾಲನ್ನು ಆಲಿಸಿದ ನ್ಯಾಯಾಲಯವು ಎಫ್ಐಆರ್ಗಳನ್ನು ರದ್ದುಗೊಳಿಸಿತು ಮತ್ತು ಸಂಸ್ಕಾರ ಆಶ್ರಮದ ನಿವಾಸಿಗಳು ಮತ್ತು ಸಿಬ್ಬಂದಿಗಳಿಗೆ ಪಿಝ್ಝಾ ಮತ್ತು ಮಜ್ಜಿಗೆಯನ್ನು ಹಂಚುವ ಮೂಲಕ ಸಮುದಾಯ ಸೇವೆಯನ್ನು ಮಾಡುವಂತೆ ಆದೇಶಿಸಿತು.







